ವರ್ಷದ ಶ್ರೇಷ್ಠ ನಟ ನಟಿಯರಾಗಿ ಪ್ರಕಾಶ್ ರೈ, ರಾಣಿ ಮುಖರ್ಜಿ!
IFM
ಕನ್ನಡಿಗ ಪ್ರಕಾಶ್ ರೈಗೆ ಮತ್ತೊಂದು ಪ್ರಶಸ್ತಿಯ ಗರಿ ದೊರೆತಿದೆ. ಪ್ರತಿಷ್ಠಿತ ವಿ.ಶಾಂತಾರಾಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷದ ಶ್ರೇಷ್ಠ ನಟ ಪ್ರಶಸ್ತಿಗೆ ಪ್ರಕಾಶ್ ರೈ ಭಾಜನರಾದರೆ, ಶ್ರೇಷ್ಠ ನಟಿಯಾಗಿ ರಾಣಿ ಮುಖರ್ಜಿ ಹೊರಹೊಮ್ಮಿದರು.
ದಿಲ್ ಬೋಲೆ ಹಡಿಪ್ಪಾ ಚಿತ್ರದಲ್ಲಿ ರಾಣಿ ಮುಖರ್ಜಿ ಸರ್ದಾರ್ಜಿಯ ವೇಷದಲ್ಲಿ ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಆಡಿದ್ದು ನೋಡಿಯೇ ಬಾಲಿವುಡ್ ನಿಬ್ಬೆರಗಾಗಿತ್ತು. ಈ ಚಿತ್ರದ ಅಭಿನಯಕ್ಕೆ ರಾಣಿ ಮುಖರ್ಜಿ ವರ್ಷದ ಶ್ರೇಷ್ಠ ನಟಿಯಾಗಿ ಪ್ರಶಸ್ತಿ ಪಡೆದರು. ತಮಿಳಿನ ಕಾಂಚೀವರಂ ಚಿತ್ರದ ಅದ್ಭುತ ನಟನೆಗಾಗಿ ಪ್ರಕಾಶ್ ರೈ ಬಾಲಿವುಡ್ಡಿನ ಇತರ ಘಟಾನುಘಟಿ ನಟರನ್ನೆಲ್ಲ ಹಿಂದಿಕ್ಕಿ ತನ್ನ ಮನೋಜ್ಞ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.
IFM
ತಮಿಳಿನ ಕಾಚೀವರಂ ಚಿತ್ರದ ನಿರ್ದೇಶನಕ್ಕಾಗಿ ಪ್ರಿಯದರ್ಶನ್ ಶ್ರೇಷ್ಠ ನಿರ್ದೇಶಕ ಎಂಬ ಚಿನ್ನದ ಪದಕ ಪಡೆದರು. ಎರಡನೇ ಸ್ಥಾನದಲ್ಲಿ ಗಬ್ರಿಚಾ ಪಾಸ್ ಎಂಬ ಮರಾಠಿ ಚಿತ್ರ ಬೆಳ್ಳಿಯ ಪದಕ ಪಡೆದರೆ, ಸೈಫ್ ಅಲಿ ಖಾ್ ನಟನೆ ಹಾಗೂ ನಿರ್ಮಾಣದ ಲವ್ ಆಜ್ ಕಲ್ ಚಿತ್ರ ಕಂಚಿನ ಪದಕ ಗೆದ್ದುಕೊಂಡಿತು. ಕನ್ನಡದ ದೇವೀರಿ ಚಿತ್ರದ ಖ್ಯಾತಿಯ ನಂದಿತಾ ದಾಸ್ ತನ್ನ ಫಿರಾಕ್ ಚಿತ್ರದ ನಿರ್ದೇಶನಕ್ಕೆ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರು.
ರಾಣಿ ಮುಖರ್ಜಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ದಿಲ್ ಬೋಲೆ ಹಡಿಪ್ಪಾ ನನ್ನ ಚಿತ್ರ ಜೀವನದಲ್ಲಿ ಹೃದಯಕ್ಕೆ ಹತ್ತಿರವಾದ ಚಿತ್ರ. ಆ ಚಿತ್ರದಲ್ಲಿ ನಾನು ಹುಡುಗನಂತಾಗಲು ಸಾಕಷ್ಟು ಶ್ರಮ ಪಟ್ಟಿದ್ದೆ. ಬ್ಯಾಟು ಬಾಲು ಹಿಡಿದು ಕ್ರಿಕೆಟ್ ಕಲಿತಿದ್ದೆ ಎಂದರು. ಅತ್ಯುತ್ತಮ ನಿರ್ದೇಶನಕ್ಕಾಗಿ ಚಿನ್ನದ ಪದಕ ಪಡೆದ ಪ್ರಿಯದರ್ಶನ್ ಮಾತನಾಡುತ್ತಾ, ನನ್ನ 27 ವರ್ಷಗಳ ಚಿತ್ರ ಜೀವನದಲ್ಲಿ 80ಕ್ಕೂ ಹೆಚ್ಚು ಚಿತ್ರ ನೀಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆಯುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.