ಮುಂಗಾರು ಮಳೆಯ ಖ್ಯಾತಿಯ ಪೂಜಾ ಗಾಂಧಿಗೆ ಸ್ವಲ್ಪ ವಿಶ್ರಾಂತಿ ಬೇಕಂತೆ. ಎಡೆಬಿಡದೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡು ಸುಸ್ತಾಗಿರುವ ಪೂಜಾ ಗಾಂಧಿ ಇನ್ನು ಜನವರಿ ನಂತರವಷ್ಟೇ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಾಳಂತೆ. ಅಲ್ಲಿವರೆಗೆ ಫುಲ್ ರೆಸ್ಟ್!
ಹೌದು. ಕನ್ನಡದಲ್ಲಿ ಮಳೆ ಸುರಿಸಿದ ಬೆಡಗಿ ಪೂಜಾ ಗಾಂಧಿ ಬಹುಬೇಗನೆ ಕನ್ನಡ ಕಲಿತು ಕನ್ನಡದವಳೇ ಆಗಿದ್ದಾಳೆ. ಪೂಜಾರ ಶ್ರೀಹರಿಕಥೆ ಹಾಗೂ ಮಿನುಗು ಚಿತ್ರಗಳು ಪೂರ್ತಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿವೆ. ಹಾಗಾಗಿ ಮುಂದಿನ ಪ್ರಾಜೆಕ್ಟ್ ಏನಪ್ಪಾ ಅಂದ್ರೆ ಈಕೆ ಹೇಳೋದು ಸದ್ಯಕ್ಕೆ ಫುಲ್ ರೆಸ್ಟ್. ಜನವರಿ ನಂತರವಷ್ಟೇ ಚಿತ್ರಗಳ ಬಗ್ಗೆ ಯೋಚನೆ!
ಒಂದಾದ ಮೇಲೊಂದರಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪೂಜಾ ಬೆವರಿಳಿಸುತ್ತಿದ್ದಾರೆ. ಈಗ ಸದ್ಯಕ್ಕೆ ಅವರಿಗೆ ಬ್ರೇಕ್ ಬೇಕು. ಚಿತ್ರಗಳ ಆಫರ್ ಒಂದರ ಮೇಲೊಂದರಂತೆ ಬರುತ್ತಲೇ ಇವೆಯಂತೆ. ಆದರೂ, ಯಾವುದಕ್ಕೂ ಸದ್ಯ ಒಪ್ಪಿಲ್ಲ. ಹಲವನ್ನು ಮುಲಾಜಿಲ್ಲದೆ ರಿಜೆಕ್ಟ್ ಮಾಡಿದ್ದಾರಂತೆ ಪೂಜಾ. ಈ ವರ್ಷ ಬಹುತೇಕ ಚಿತ್ರಗಳೆಲ್ಲವೂ ಫ್ಲಾಪ್ ಆಗಿದ್ದು ನೋಡಿಯೋ ಏನೋ, ಪೂಜಾಗೆ ಕೊಂಚ ಜ್ಞಾನೋದಯವಾದಂತಿದೆ. ಇನ್ನು ಕಥೆ ಉತ್ತಮವಿದ್ದರೆ ಮಾತ್ರ ಸಹಿ ಹಾಕುತ್ತೇನೆ. ಸದ್ಯಕ್ಕಂತೂ ಯಾವ ಚಿತ್ರಕ್ಕೂ ಒಪ್ಪಿಲ್ಲ. ಎಲ್ಲವೂ ಜನವರಿಯ ನಂತರವಷ್ಟೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ ಪೂಜಾ.