ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಜೋಗಯ್ಯ (ಜೋಗಿ- ಭಾಗ 2) ಚಿತ್ರ ಮುಂದಿನ ಏಪ್ರಿಲ್ 24ಕ್ಕೆ ಸೆಟ್ಟೇರಲಿದೆಯಂತೆ. ಚಿತ್ರವನ್ನು ಪ್ರೇಮ್ ನಿರ್ದೇಶಿಸಿದರೆ, ನಿರ್ಮಾಣದ ಜವಾಬ್ದಾರಿಯನ್ನು ಪ್ರೇಮ್ ಹೆಂಡತಿ ರಕ್ಷಿತಾ ನಿರ್ವಹಿಸಲಿದ್ದಾರೆ. ಆ ಮೂಲಕ ರಕ್ಷಿತಾ ನಿರ್ಮಾಪಕಿಯಾಗಿ ಮತ್ತೆ ಸ್ಯಾಂಡಲ್ ವುಡ್ಡಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಏಪ್ರಿಲ್ 24 ಡಾ.ರಾಜ್ ಕುಮಾರ್ ಅವರ ಜನ್ಮದಿನ. ಅಂದು ಜೋಗಿ ಸಿನಿಮಾವೂ ಇದೇ ಏಪ್ರಿಲ್ 24ರಂದೇ ಸೆಟ್ಟೇರಿತ್ತು. ಪುನೀತ್ ಅಭಿನಯದ ರಾಜ್- ದಿ ಶೋಮ್ಯಾನ್ ಚಿತ್ರ ಕೂಡಾ ಎಪ್ರಿಲ್ 24ರಂದೇ ಮುಹೂರ್ತ ಆಚರಿಸಿತ್ತು. ಈಗ ಜೋಗಿಯ ಎರಡೇ ಭಾಗವೆಂದೇ ಹೇಳಲಾಗುತ್ತಿರುವ ಜೋಗಯ್ಯ ಚಿತ್ರವೂ ಅದೇ ದಿನ ಸೆಟ್ಟೇರುತ್ತಿರುವುದು ವಿಶೇಷ.
MOKSHA
ಕಬಡ್ಡಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು ಜೋಗಯ್ಯ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ. ಹರಿಕೃಷ್ಣ ಅವರ ಸಂಗೀತ ಜೋಗಯ್ಯಕ್ಕಿದೆ. ಇವಿಷ್ಟನ್ನು ಬಿಟ್ಟರೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ಬಿಟ್ಟುಕೊಟ್ಟಿಲ್ಲ ಪ್ರೇಮ್. ಆದರೂ, ಜೋಗಿ ಚಿತ್ರದ ಚುಕುಬುಕು ರೈಲಿನ ಹುಡುಗಿ ಜೆನಿಫರ್ ಕೋತ್ವಾಲ್ ಜೋಗಯ್ಯದಲ್ಲೂ ಕಾಣಿಸಿಕೊಳ್ಳಲಿದ್ದಾಳೆ ಎಂಬುದು ಬಲ್ಲ ಮೂಲಗಳ ಮಾತು.
ಶೂಟಿಂಗ್ ಮುಂಬೈ ಹಾಗೂ ವಿದೇಶಗಳಲ್ಲಿ ನಡೆಯಲಿದೆಯಂತೆ. ಒಟ್ಟಾರೆ ಜೋಗಯ್ಯ ಸೆಟ್ಟೇರುವ ಮೊದಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಪ್ರೇಮ್ ಚಿತ್ರವೆಂದ ಮೇಲೆ ಈ ಥರ ಚಿತ್ರ ಭಾರೀ ಸುದ್ದಿ ಮಾಡುತ್ತಿರುವುದು ಹೊಸತೇನಲ್ಲ. ಯಾವುದಕ್ಕೂ ಚಿತ್ರದ ಫಲಿತಾಂಶಕ್ಕಿನ್ನೂ ಸಾಕಷ್ಟು ಸಮಯ ಕಾಯಬೇಕು.