ಚಿತ್ರರಂಗದವರ ಸರ್ಕಸ್ಸುಗಳೇ ಹೀಗೆ. ದಪ್ಪಗಿರುವವರಿಗೆ ಸ್ಲಿಮ್ ಆಗುವ ಆಸೆ. ಸಣ್ಣ ಇರುವವರಿಗೆ ಸಿಕ್ಸ್ ಪ್ಯಾಕ್ ಬರಿಸಿಕೊಳ್ಳುವ ಬಯಕೆ. ಒಟ್ಟಾರೆ ಬಾಲಿವುಡ್ ಖಯಾಲಿ ಕನ್ನಡ ಚಿತ್ರರಂಗಕ್ಕೂ ಆವರಿಸಿಕೊಂಡಿದೆ.
ಸಂಜು ವೆಡ್ಸ್ ಗೀತಾ ಚಿತ್ರಕ್ಕಾಗಿ ಸಣ್ಣ ಆಗಲು ನಟ ಕಿಟ್ಟಿ ಊಟ ಬಿಟ್ಟ ಸಂಗತಿ ನಿಮಗೆ ಇಗಾಗಲೇ ತಿಳಿದ ವಿಷಯ. ಇದೀಗ ದುನಿಯಾ ವಿಜಯ್ ಸಿಕ್ಸ್ ಪ್ಯಾಕ್ ಬರಿಸಲು ನೂತನ ಮಾದರಿಯ ಕಸರತ್ತಿನ ಮೊರೆ ಹೋಗಿದ್ದಾರಂತೆ.
ಶಂಕರ್ ಐಪಿಎಸ್ ಚಿತ್ರಕ್ಕೆ ಕಳೆದ ಮೂರು ತಿಂಗಳಿಂದ ವಿಜಿ ಸಿಕ್ಕಾಪಟ್ಟೆ ಸರ್ಕಸ್ ಮಾಡುತ್ತಿದ್ದರು. ಇದೀಗ ಆ ಕಸರತ್ತು ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಊಟ ಬಿಟ್ಟು ಬರೀ ಮಾತ್ರೆ ತಿನ್ನುತ್ತಿದ್ದಾರೆ. ಅದೂ ವಿದೇಶದಿಂದ ತರಿಸಿಕೊಂಡ ಪ್ರೋಟೀನ್ ಮಾತ್ರೆಗಳು.
ಇನ್ನೂ ಹತ್ತು ದಿನಗಳು ದೇಹ ದಂಡಿಸುವ ಕಾರ್ಯಕ್ರಮವಿದೆಯಂತೆ. ಈ ಕ್ರಮ ಅಂತಿಮ ಹಂತಕ್ಕೆ ಬರುವಾಗ ಕೊನೆಯ ಎರಡು ದಿನಗಳ ಕಾಲ ನೀರನ್ನೂ ಕುಡಿಯದೆ ಕಸರತ್ತು ಮಾಡಬೇಕಂತೆ. ಅಬ್ಬಬ್ಬಾ, ಸಾಕು. ಇನ್ನು ವಿಜಿ ಅಂಗಸೌಷ್ಠವ ನೋಡುವುದೊಂದೇ ಬಾಕಿ. ಈ ಹೊಸ ಮೈಕಟ್ಟು ಅವರ ಅಭಿಮಾನಿಗಳಿಗೆ ಅದೆಷ್ಟು ಖುಷಿ ತರಲಿದೆಯೋ ಎನೋ.