ಹಿರಿಯ ನಟರಾದ ದೇವರಾಜ್, ಅಭಿಜಿತ್ ಸೇರಿದಂತೆ ಮತ್ತಿತರ ತಾರಾ ಬಳಗವಿರುವ 'ಅಪರಾಧಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣ ಮುಗಿದು ಡಬ್ಬಿಂಗ್ ಕಾರ್ಯ ಕೂಡ ಮುಗಿದು ಹೋಗಿದೆ. ಮುಂದಿನ ಜನವರಿಯಲ್ಲಿ ಚಿತ್ರ ಬಿಡುಗಡೆ ಮಾಡಬೇಕೆಂದು ಅಂದುಕೊಂಡಿದ್ದಾರಂತೆ ನಿರ್ಮಾಪಕರಾದ ವಾಸಿಂ.
ಇದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆ ಹೊಂದಿದ ಚಿತ್ರ ಎನ್ನುತ್ತಾರೆ ನಿರ್ದೇಶಕ ರಾಜಶೇಖರ್. ಒಂದು ಕೊಲೆಯ ಸುತ್ತ ಕತೆ ಸಾಗುತ್ತದೆಯಂತೆ. ಚಿತ್ರದಲ್ಲಿ ದೇವರಾಜ್ ಹೆಂಡತಿ ಸಾವನ್ನಪ್ಪುತ್ತಾರೆ. ಅವರು ಹೇಗೆ ಸತ್ತರು ಎಂಬುದೇ ಚಿತ್ರದ ಮರ್ಮ ಎನ್ನುತ್ತಾರೆ ನಿರ್ದೇಶಕರು.
ವಿಶೇಷವೆಂದರೆ ಈ ಚಿತ್ರದಲ್ಲಿ ಹಾಡುಗಳಿಲ್ಲವಂತೆ. ದೇವರಾಜ್ ಹೆಂಡತಿಯಾಗಿ ಸಂಗೀತಾ, ಸಿಬಿಐ ಆಗಿ ಅವಿನಾಶ್, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿಜಿತ್ ಕಾಣಿಸಿಕೊಂಡಿದ್ದಾರೆ.