ಈ ವರ್ಷ ಸ್ಯಾಂಡಲ್‌ವುಡ್ಡಿನಲ್ಲಿ ಗೆಲುವು ಸಾಧಿಸಿದ ಚಿತ್ರಗಳು ಕೆಲವೇ ಕೆಲವು. ಈ ಕೆಲವೇ ಚಿತ್ರಗಳ ಗೆಲುವಿನ ಹಿಂದೆಯೂ ಒಂದು ಗುಟ್ಟಿದೆ. ಅದೇನೆಂದರೆ ಮಾತು, ಮಾತು ಮತ್ತು ಬರಿ ಮಾತು.
MOKSHA
ಹೌದು, 2009ರ ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದ ಕನ್ನಡದ ಚಿತ್ರಗಳಲ್ಲಿ ಮಾತೇ ಮೂಲ ಬಂಡವಾಳ. ಮಾತಿನಿಂದಲೇ ಚಿತ್ರ ಗೆಲ್ಲಬೇಕೆಂಬುದು ನಿರ್ದೇಶಕರ ಹಟ ಅನ್ನಿಸುತ್ತೆ. ಇಲ್ಲಿ ಸಂಭಾಷಣೆ ರಚಿಸುವವರಿಗೆ ನಾವು ಮೊದಲು ಧನ್ಯವಾದ ಹೇಳಲೇಬೇಕು.
ಎದ್ದೇಳು ಮಂಜುನಾಥ, ಮನಸಾರೆ, ತಾಕತ್, ಸವಾರಿ, ಜಂಗ್ಲಿ ಚಿತ್ರಗಳ ಗೆಲುವಿನಲ್ಲಿ ಮಾತಿನ ಪಾತ್ರ ದೊಡ್ಡದು. ಅಷ್ಟೆ ಏಕೆ ಮೊನ್ನೆ ಮೊನ್ನೆ ತೆರೆಕಂಡ `ಮಳೆಯಲಿ ಜೊತೆಯಲಿ', `ಕಳ್ಳರ ಸಂತೆ' ಚಿತ್ರಗಳಲ್ಲೂ ಮಾತಿನದ್ದೇ ಕಾರುಬಾರು.
ಲವ್ ಡೈಲಾಗ್ಸ್, ಹಾಸ್ಯದ ಮಾತುಗಳು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಪದೇ ಪದೇ ಕರೆದೊಯ್ದಿವೆ. ವೆಂಕಟ ಇನ್ ಸಂಕಟ, ಚಿಕ್ಪೇಟೆ ಸಾಚಾಗಳು, ಎಷ್ಟು ನಗ್ತಿ ನಗು, ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಮುಂತಾದ ಚಿತ್ರಗಳಲ್ಲಿ ಕಚಗುಳಿಯಿಡುವ ಹಾಸ್ಯ ಸಂಭಾಷಣೆಗಳೇ ತುಂಬಿ ತುಳುಕಿದ್ದವು.
ಉಳಿದಂತೆ ಮಳೆ ಬರಲಿ ಮಂಜೂ ಇರಲಿ, ಲವ್ ಗುರು ಮುಂತಾದ ಚಿತ್ರಗಳಲ್ಲಿ ಪ್ರೀತಿಯ ಸಂಭಾಷಣೆಗಳು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.