2009 ಕಳೆಯಲು ಇನ್ನು ಕೆಲವೇ ದಿನಗಳಷ್ಟೇ ಬಾಕಿಯಿದೆ. ಅದಕ್ಕೂ ಮೊದಲು ಕನ್ನಡ ಚಿತ್ರರಂಗದ ನಟ-ನಟಿಯರು ಹೊಸ ವರ್ಷವನ್ನು ಸ್ವಾಗತಿಸುವ ಹಾಗೂ ಮುಂದಿನ ವರ್ಷದಲ್ಲಿ ಮಾಡಬೇಕಾದ ಕಾರ್ಯಗಳ ಪ್ಲಾನ್ ಮಾಡಿದ್ದಾರೆ. ಈ ವರ್ಷದ ತಮ್ಮ ನೆನಪುಗಳನ್ನು ಸಹ ಕೆಲವರು ಹಂಚಿಕೊಂಡಿದ್ದಾರೆ.
ವಿಜಯ್: ಮುಂದಿನ ವರ್ಷ ಪೂರ್ತಿ ನಟಿಸಬೇಕಂತೆ. ನಿರ್ಮಾಪಕರಿಗೆ ಮೋಸವಾಗದಂತೆ ಅಭಿನಯಿಸಬೇಕು. 2009ರಲ್ಲಿ `ಜಂಗ್ಲಿ', `ತಾಕತ್' ಚಿತ್ರಗಳು ಹಿಟ್ ಆದದ್ದು ವಿಜಿಗೆ ಖುಷಿಯ ವಿಚಾರ.
ಐಂದ್ರಿತಾ ರೇ: ಮುಂದಿನ ವರ್ಷ ಇನ್ನೂ ಒಳ್ಳೆಯ ಚಿತ್ರಗಳಲ್ಲಿ ನಟಿಸಬೇಕು. 2009ರ `ಮನಸಾರೆ' ಚಿತ್ರದ ಸೆಟ್ಟಲ್ಲಿ ಜನ್ಮದಿನ ಆಚರಿಸಿದ ಅನುಭವ ಚೆನ್ನಾಗಿತ್ತಂತೆ.
ಕೋಮಲ್: ಮುಂದಿನ ವರ್ಷ ಸಣ್ಣಗಾಗಬೇಕು. `ಅಪ್ಪು', `ಲಿಫ್ಟ್ ಕೊಡ್ಲಾ?' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅವರದೇ ಬ್ಯಾನರಲ್ಲಿ `ನಂದೀಶ' ಚಿತ್ರ ತಯಾರಾಗುತ್ತಿದೆ. 2009ರಲ್ಲಿ ಅವರೇ ನಾಯಕನಾದ `ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಚಿತ್ರ ಬಿಡುಗಡೆಯಾದದ್ದು ಖುಷಿ ತಂದಿತಂತೆ.
ಶುಭಾ ಪೂಂಜಾ: 2010ರಲ್ಲಿ ದೇಹದ ತೂಕ ಇಳಿಸಬೇಕಂತೆ. ಅಲ್ಲದೆ ಹೊಸ ವರ್ಷದಲ್ಲಿ `ಪ್ರೀತಿ ಹಂಗಾಮ', `ಗೋಲ್ ಮಾಲ್' ಚಿತ್ರಗಳು ಬಿಡುಗಡೆಯಾಗಲಿವೆಯಂತೆ. 2009ರಲ್ಲಿ `ಮೊಗ್ಗಿನ ಮನಸ್ಸು" ಚಿತ್ರದ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಪಡೆದದ್ದು ಸಂತೋಷ ತಂದಿದೆಯಂತೆ.
ವಿಜಯ್ ರಾಘವೇಂದ್ರ: ಯೋಜನೆ ಅಂತ ಯಾವ ವರ್ಷವೂ ಮಾಡಿಲ್ಲವಂತೆ. ಸದ್ಯಕ್ಕೆ `ರಾಧಾ' ಚಿತ್ರೀಕರಣದಲ್ಲಿದ್ದಾರಂತೆ. 2009ರ ಆರಂಭದಲ್ಲಿ ಮಗ ಹುಟ್ಟಿದ ಖುಷಿ ಇನ್ನೂ ಹೋಗಿಲ್ಲವಂತೆ.
ನೀತು: 2010ರಲ್ಲಿ ನೀತು ನಂ.1 ನಟಿಯಾಗಬೇಕಂತೆ. ಜನರ ಮನದಲ್ಲಿ ಅವರು ಸದಾ ಉಳಿಯಬೇಕಂತೆ . 2009 ಮಾತ್ರ ನೀತುಗೆ ಸಂತೋಷದ ವರ್ಷವಲ್ಲವಂತೆ.