ಶಿವರಾಜ್ ಕುಮಾರ್ ಮೂಲಕ 'ಜೋಗಿ' ಅಲೆಯನ್ನು ಸೃಷ್ಟಿಸಿದ್ದ ಪ್ರೇಮ್ 'ಜೋಗಯ್ಯ'ದೊಂದಿಗೆ ಜತೆಯಾಗಿ ಮರಳಲು ಮೊದಲ ಹೆಜ್ಜೆ ಇಡುವುದು ಏಪ್ರಿಲ್ ನಂತರವಾದರೂ ಅಗತ್ಯ ಪೂರ್ವತಯಾರಿಯಲ್ಲಿ ತೊಡಗಿದ್ದಾರಂತೆ. ಅದರಲ್ಲಿ ಪ್ರಮುಖವಾದುದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಕನ್ನಡದ ಸ್ಟಾರುಗಳ ಅಭಿಪ್ರಾಯವನ್ನು ಪಡೆದು ಚಿತ್ರಕಥೆ ಬರೆಯುವುದು.
ತನ್ನ ಚಿತ್ರಕ್ಕೂ ಮೊದಲು ದೊಡ್ಡ ಹೈಪ್ ಸೃಷ್ಟಿಸುವುದು ಪ್ರೇಮ್ ತಂತ್ರ. ಅದನ್ನೇ ಜೋಗಿ ಭಾಗ ಎರಡು ಎಂದೇ ಹೇಳಲಾಗುವ ಜೋಗಯ್ಯದಲ್ಲೂ ನಡೆಸಿದ್ದು, ಈಗಾಗಲೇ ಗಾಂಧಿನಗರದ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನದೇ ನಿರ್ಮಾಣವೂ ಆಗಿರುವುದರಿಂದ ಇದವರಿಗೆ ಅನಿವಾರ್ಯವೂ ಆಗಿರಬಹುದು.
ಇದೇ ರೀತಿ ಪ್ರಚಾರ ಮಾಡಿಯೂ 'ರಾಜ್' ಚಿತ್ರವನ್ನು ಗೆಲ್ಲಿಸಲು ವಿಫಲವಾಗಿರುವುದರಿಂದ 'ಜೋಗಯ್ಯ' ಎತ್ತಕಡೆಯಿಂದ ನೋಡಿದರೂ ಗೆಲ್ಲುವುದು ಅಗತ್ಯ. 'ಪ್ರೀತಿ ಏಕೆ ಭೂಮಿ ಮೇಲಿದೆ?' ಮೂಲಕ ಮುಖ-ಮೂತಿ ಹೊಡೆಸಿಕೊಂಡ ಪ್ರೇಮ್ 'ಜೋಗಯ್ಯ'ದಲ್ಲೂ ಸೋತರೆ ತನ್ನ ನಿರ್ದೇಶಕ ವೃತ್ತಿ ಜೀವನವೇ ತ್ರಿಶಂಕು ಸ್ಥಿತಿ ತಲುಪಲಿದೆ ಎಂಬ ಅರಿವೂ ಅವರಿಗಿದೆ.
ಹಾಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿರುವ ಪ್ರೇಮ್ ಪ್ರಮುಖರ ಅಭಿಪ್ರಾಯಗಳನ್ನು ಒಗ್ಗೂಡಿಸಿ ಕಥೆ ಹೆಣೆಯಲಿದ್ದಾರೆ. 'ಜೋಗಿ'ಯನ್ನು ಮೆಚ್ಚಿ ಬೆನ್ನುತಟ್ಟಿದ್ದ ರಜನಿಕಾಂತ್ ಹಾಗೂ ಕನ್ನಡದ ಪ್ರಮುಖ ನಟರು 'ಜೋಗಯ್ಯ'ದಲ್ಲಿ ಏನನ್ನು ಬಯಸುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕುವಲ್ಲಿ ಪ್ರೇಮ್ ಈಗ ಸಿಕ್ಕಾಪಟ್ಟೆ ಬ್ಯುಸಿ.
MOKSHA
ಈಗಾಗಲೇ ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಉಪೇಂದ್ರ ಮತ್ತು ಗಣೇಶ್‌ರನ್ನು ಕಂಡು ಸಮಾಲೋಚನೆ ನಡೆಸಿರುವ ಪ್ರೇಮ್ ಶೀಘ್ರದಲ್ಲೇ ಉಳಿದ ನಟರ ಬೆನ್ನು ಬೀಳಲಿದ್ದಾರೆ. ಇಲ್ಲಿ ಅವರು ಮಹಿಳಾ ಮಣಿಗಳನ್ನೂ ನಿರ್ಲಕ್ಷಿಸಿಲ್ಲ. ರಮ್ಯಾ, ಶರ್ಮಿಳಾ ಮಾಂಡ್ರೆ, ಜಿಂಕೆ ಮರಿ ರೇಖಾ ಮತ್ತು ಪೂಜಾ ಗಾಂಧಿ ಅಭಿಪ್ರಾಯಗಳನ್ನು ಪಡೆದಿದ್ದಾರಂತೆ.
ಆದರೆ ಯಾರ ಅಭಿಪ್ರಾಯಗಳನ್ನೂ ಅವರು ಬಹಿರಂಗಪಡಿಸಿಲ್ಲ. ಚಿತ್ರ ಸೆಟ್ಟೇರುವ ದಿನದಂದು ಎಲ್ಲಾ ನಟ-ನಟಿಯರ ಸಲಹೆಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಜೋಗಿ ಸೂಪರ್ ಹಿಟ್ ಆದುದ್ದಲ್ಲದೆ, 40 ಕೋಟಿ ರೂಪಾಯಿಗಳನ್ನು ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದಿತ್ತು. ಹಾಗಾಗಿ ಜೋಗಯ್ಯ ಡಬ್ಬಲ್ ಹಿಟ್ ಆಗುವುದು ನನ್ನ ಆಶಯ. ಇದು ಕೇವಲ ಸಂಪಾದನೆಯಲ್ಲಿ ಮಾತ್ರವಲ್ಲ, ಗುಣಮಟ್ಟ ವಿಚಾರದಲ್ಲೂ. ಹಾಗಾಗಿ ತರಾತುರಿ ನನ್ನಲ್ಲಿಲ್ಲ. ಅಗತ್ಯ ಸಮಯವನ್ನು ತೆಗೆದುಕೊಂಡು ಚಿತ್ರ ಆರಂಭಿಸುತ್ತೇನೆ. ಜನವರಿ 22ರಂದು ಚಿತ್ರದ ಆಡಿಯೋ ರೆಕಾರ್ಡಿಂಗ್ ಆರಂಭವಾಗಲಿದೆ ಎಂದು ಪ್ರೇಮ್ ತಿಳಿಸಿದ್ದಾರೆ.