ಕಾರಣಾಂತರಗಳಿಂದ ಪಡ್ಡೆ ಹುಡುಗರ ಚಿತ್ರಗಳಲ್ಲಿ ನಟಿಸಿ ಹೆಸರು ಕೆಡಿಸಿಕೊಂಡಿದ್ದ 'ಭಾರ'ದ ಮಲಯಾಳಂ ನಟಿ ಶಕೀಲಾ ಕೊನೆಗೂ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾಳೆ. ಆ ಮೂಲಕ ತನಗೂ ಒಂದು ಖಾಸಗಿ ಜೀವನವಿದೆ ಎನ್ನುವುದನ್ನು ಸಮಾಜಕ್ಕೆ ಸಾರಿದ್ದಾಳೆ.
ಕಳೆದ ಕೆಲವು ವರ್ಷಗಳ ಹಿಂದೆ ಆಕೆಗೊಬ್ಬ ಪ್ರೇಮಿಯಿದ್ದಾನೆ ಎಂಬ ಗಾಸಿಪ್ಪುಗಳು ಹರಡಿದ್ದವಾದರೂ ಅದು ಹೆಚ್ಚು ಉದ್ದ ಬೆಳೆಯಲು ಶಕೀಲಾ ಅವಕಾಶ ನೀಡಿರಲಿಲ್ಲ. ಆದರೆ ಇದೀಗ ಚೆನ್ನೈ ಮೂಲದ ಉದ್ಯಮಿಯೊಬ್ಬನನ್ನು ತಾನು ಮದುವೆಯಾಗುತ್ತಿರುವುದಾಗಿ ಪ್ರಕಟಿಸಿಯೇ ಬಿಟ್ಟಿದ್ದಾಳೆ ಒಂದು ಕಾಲದ ಸೆಮಿ-ಸೆಕ್ಸ್ ಚಿತ್ರಗಳ ರಾಣಿ.
WD
ಮದುವೆ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿರುವ ಆಕೆ, ಬಹುಕಾಲದ ಪ್ರೇಮಿಯನ್ನೇ ಆರಿಸಿರುವುದನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾಳೆ. 2010ರ ಜೂನ್ ತಿಂಗಳಲ್ಲಿ ಮದುವೆಯಾಗುತ್ತಿದ್ದೇನೆ. ಭಾವೀ ಪತಿಯ ಅನುಮತಿ ಸಿಕ್ಕಿದರೆ ಹೆಚ್ಚಿನ ವಿವರಗಳನ್ನು ನಿಮಗೆ ನೀಡಬಲ್ಲೆ ಎಂದು ಮತ್ತಷ್ಟು ಆಳ ಪ್ರಶ್ನೆಗಳನ್ನು ಕೇಳಿದವರಿಗೆ ಶಕೀಲಾ ನೀಡಿದ ಉತ್ತರ. ಆದರೆ ಮೂಲಗಳ ಪ್ರಕಾರ ಆತನ ಹೆಸರು ಸಾಬು ಸ್ಯಾಮ್ವೆಲ್.
ನನಗೆ ಊರುಗೋಲಾಗಿದ್ದ ಇದ್ದ ತಾಯಿಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿದ್ದೇನೆ. ಏಕಾಂಗಿ ಮತ್ತು ಅರಕ್ಷಿತ ಭಾವ ನನ್ನನ್ನು ಬೆಂಬಿಡದೆ ಕಾಡುತ್ತಿದೆ. ಹಾಗಾಗಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಈಗೀಗ ಕೇವಲ ಹಾಸ್ಯ ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ನಟಿ ಹೇಳಿಕೊಂಡಿದ್ದಾಳೆ.
ಮೋಹನ್‌ಲಾಲ್ ಮತ್ತು ಮಮ್ಮೂಟ್ಟಿಗಳಿಂದಾಗಿ ಮಲಯಾಳಂ ಚಿತ್ರರಂಗದಿಂದ ನಿಮ್ಮನ್ನು ಹೊರಗಟ್ಟಲಾಗಿದೆ ಎಂಬ ವರದಿಗಳನ್ನೂ ಆಕೆ ನಿರಾಕರಿಸಿದ್ದಾಳೆ.
ಇದು ಆಧಾರ ರಹಿತ ಮೂಲಗಳ ಸುದ್ದಿಗಳಷ್ಟೇ. 'ಅಂತಹ' ಸಿನಿಮಾಗಳಲ್ಲಿ ನಟಿಸುವ ನನ್ನ ಕಾಲ ಮುಗಿದು ಹೋಗಿದೆ. ಅದರಲ್ಲಿನ್ನು ನಾನು ಮಾಡುವುದೇನಿಲ್ಲ ಎಂದು ಗತಕಾಲಕ್ಕೆ ತೆರೆ ಎಳೆದಿದ್ದಾಳೆ ಶಕೀಲಾ.
ಪ್ರಕಾಶ್ ನಿರ್ದೇಶನದ ಶ್ರೀ, ಇಂದ್ರಜಿತ್ ಅವರ ಮೊನಾಲಿಸಾ, ಕೆಂಪ ಮುಂತಾದ ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಶಕೀಲಾ, ಮಲಯಾಳಂನ 'ಎ' ಗ್ರೇಡ್ ಚಿತ್ರಗಳ ಮೂಲಕ ಪ್ರಸಿದ್ಧಿಗೆ ಬಂದವಳು. ಆದರೆ ಇತ್ತೀಚಿನ ದಿನಗಳಲ್ಲಿ ಆ ವರ್ತುಲದಿಂದ ಹೊರ ಬಂದಿರುವ ಆಕೆ, ಮನೆಯವರೆಲ್ಲ ಒಟ್ಟಿಗೆ ನೋಡುವ ಚಿತ್ರಗಳಲ್ಲಷ್ಟೇ ನಟಿಸುತ್ತಾ ಮತ್ತೊಬ್ಬ ಸಿಲ್ಕ್ ಸ್ಮಿತಾ ಆಗುವುದನ್ನು ತಪ್ಪಿಸಿಕೊಂಡಿದ್ದಾಳೆ.
ಇದೀಗ 36 ವರ್ಷ ತುಂಬಿರುವ ಆಕೆಯ ಮೂಲ ಹೆಸರು ಅಂಜಲಿ. ಸೆಮಿ-ಸೆಕ್ಸ್ ಸಿನಿಮಾಗಳ ಮೂಲಕ ಮಲಯಾಳಂ ಚಿತ್ರರಂಗದ ದಿಗ್ಗಜರಾದ ಮೋಹನಲಾಲ್ ಮತ್ತು ಮಮ್ಮೂಟ್ಟಿಯವರಿಗೆ ಒಂದು ಕಾಲದಲ್ಲಿ ಕೆಲಸವಿಲ್ಲದಂತೆ ಮಾಡಿದ ಕೀರ್ತಿ ಕೂಡ ಆಕೆಗೇ ಸಲ್ಲುತ್ತದೆ.