ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೃದಯಾಘಾತ: ಸಾಹಸ ಸಿಂಹ ವಿಷ್ಣುವರ್ಧನ್ ಇನ್ನಿಲ್ಲ (Vishnuvardhan No More | Kannada Film Actor | Vishnu Sena | Kannada Cinema Artist)
ಸುದ್ದಿ/ಗಾಸಿಪ್
Bookmark and Share Feedback Print
 
Vishnuvardhan
MOKSHA
ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರು ಮಂಗಳವಾರ ಮಧ್ಯರಾತ್ರಿ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ಕನ್ನಡ ಚಿತ್ರರಂಗದ ದಿಗ್ಗಜರು ಮತ್ತು ಚಿತ್ರಪ್ರೇಮಿಗಳು ತೀವ್ರ ಆಘಾತಕ್ಕೀಡಾಗಿದ್ದಾರೆ.

ಮೈಸೂರಿನಲ್ಲಿದ್ದ ವಿಷ್ಣುವರ್ಧನ್‌ರಿಗೆ ಬುಧವಾರ ಮುಂಜಾನೆ 2.30ರ ಹೊತ್ತಿಗೆ ಎದೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ಮುಟ್ಟುವ ಮೊದಲೇ ಅವರು ಸುಮಾರು 3.00 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ. 59 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಹಾಗೂ ನಟಿ ಭಾರತಿ ಹಾಗೂ ಇಬ್ಬರು ದತ್ತು ಪುತ್ರಿಯರಾದ ಕೀರ್ತಿ ಮತ್ತು ಚಂದನರನ್ನು ಅಗಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ಡಾ.ವಿಷ್ಣುವರ್ಧನ್ 197 ಚಿತ್ರಗಳಲ್ಲಿ ನಟಿಸಿದ್ದು, 7 ರಾಜ್ಯಪ್ರಶಸ್ತಿಗಳು, 5 ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಕೀರ್ತಿ ಮುಕುಟವನ್ನು ಅಲಂಕರಿಸಿದ್ದವು.

ಅವರು ಕಣಗಾಲ್ ಶಿಷ್ಯ...
ಡಾ. ವಿಷ್ಣುವರ್ಧನ್ 1950ರ ಸೆಪ್ಟೆಂಬರ್ 18ರಂದು ಜನಿಸಿದ ವಿಷ್ಣು, ಅವರ ಮೂಲ ಹೆಸರು ಸಂಪತ್ ಕುಮಾರ್. ಪುಟ್ಟಣ್ಣ ಕಣಗಾಲ್ ಅವರು 'ನಾಗರಹಾವು' ಚಿತ್ರದ ಚಿತ್ರೀಕರಣದ ಸಂದರ್ಭ ಅವರಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿದ್ದರು.

ತಮ್ಮ ಅಭಿನಯದಿಂದಾಗಿಯೇ ಸಾಹಸ ಸಿಂಹ ಎಂಬ ಬಿರುದು ಪಡೆದಿರುವ ಡಾ. ವಿಷ್ಣುವರ್ಧನ್ ಅವರ ಮೊದಲ ಚಿತ್ರ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರದ ಮೂಲಕ ತೆರೆಗೆ ಬಂದ ಅವರು, 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಾಗರಹಾವು ಚಿತ್ರದಲ್ಲಿ ಸಿಡುಕಿನ ಪುಂಡ ರಾಮಚಾರಿ ಮತ್ತು ಸುಗಮ ಸಂಗೀತ ಲೋಕದ ಸಾಮ್ರಾಟ್ ಸಿ.ಅಶ್ವತ್ಥ್ ಬೆನ್ನು ಬೆನ್ನಿಗೆ ಅಗಲಿರುವುದು ಸಿನಿಮಾ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತ್ತು. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿ೦ಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ನಟನೆ ಮಾತ್ರವೇ ಅಲ್ಲದೆ, ಹಿನ್ನೆಲೆ ಗಾಯನವನ್ನೂ ಕೂಡ ಮಾಡಿರುವ ವಿಷ್ಣು ವರ್ಧನ್ ಅವರು 'ಬಂಧನ' ಚಿತ್ರದಲ್ಲಿ ನೀಡಿದ ಅಭಿನಯವು ಎಲ್ಲರ ಮನ ಗೆದ್ದಿತ್ತು.
Vishnu dead body
PR

ಸಾರ್ವಜನಿಕ ದರ್ಶನ-ಅಂತ್ಯಸಂಸ್ಕಾರ..
ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ಜಯನಗರ ನಿವಾಸಕ್ಕೆ ತರಲಾಗಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ಬನಶಂಕರಿ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಭಾರತಿ ಮನವಿ....
ಯಜಮಾನ ನಿಮ್ಮನ್ನು ಬಿಟ್ಟು ಯಾರನ್ನೂ ಇಷ್ಟಪಟ್ಟವರಲ್ಲ. ಅವರಿಗೆ ಗಲಾಟೆ, ದೊಂಬಿಗಳು ಇಷ್ಟವಾಗಲ್ಲ. ಅದೂ ನಿಮಗೆ ಗೊತ್ತು. ಎಲ್ಲರೂ ಶಾಂತ ರೀತಿಯಿಂದಿದ್ದು ಅವರನ್ನ ಕಳಿಸಿಕೊಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನಡೆಸಿಕೊಡಿ ಎಂದು ಭಾರತಿ ವಿಷ್ಣುವರ್ಧನ್ ಕರ್ನಾಟಕ ಜನತೆ ಹಾಗೂ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಿಂದ ವಿಷಸೇವನೆ, ಲಾಠಿಚಾರ್ಜ್...
ವಿಷ್ಣು ನಿಧನರಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ಮಧ್ಯೆ, ಯಾವುದೇ ಅಹಿತಕರ ಘಟನೆ ಸಂಭವಿಸದಂತಿರಲು ಬೆಂಗಳೂರು ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಈ ನಡುವೆ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ವಿಷ್ಣು ಸಾವಿನ ದುಃಖವನ್ನು ತಡೆಯಲಾಗದೆ ಅತಿರೇಕಗಳಿಗೆ ಮುಂದಾಗುತ್ತಿರುವ ಅಭಿಮಾನಿ ವೃಂದ ಹಲವು ಕಡೆ ವಿಷ ಸೇವಿಸಿರುವುದು ವರದಿಯಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಲಾಠಿಚಾರ್ಜ್‌ಗಳು ಕೂಡ ನಡೆದಿವೆ.

ಬೆಂಗಳೂರಿನ ಮಾಗಡಿ ರಸ್ತೆ ಸುಂಕದಕಟ್ಟೆಯಲ್ಲಿ ಅಭಿಮಾನಿಗಳು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಮೈಸೂರು, ದೇವನಹಳ್ಳಿ ಸೇರಿದಂತೆ ಹಲವೆಡೆ ಸಾರ್ವಜನಿಕ ಬಂದ್‌ ಆಚರಿಸಲಾಗುತ್ತಿದೆ.

ಶಾಲಾ-ಕಾಲೇಜುಗಳಿಗೆ ರಜೆ...
ಮೇರು ನಟ ಅಸ್ತಂಗತರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.
Vishnu dead body
MOKSHA


ಕನ್ನಡ ಸಿನಿಮಾಕ್ಕೂ ಇಂದು ರಜೆ...
ಇಂದು ರಾಜ್ಯದಾದ್ಯಂತ ಎಲ್ಲಾ ಸಿನಿಮಾ ಮಂದಿರಗಳನ್ನು ಮುಚ್ಚುವ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ. ಅಲ್ಲದೆ ಇಂದು ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

ಭಾರೀ ಶೋಕ...
ತೀವ್ರ ಆಘಾತ ಅನುಭವಿಸಿರುವುದು ವಿಷ್ಣು ಆಪ್ತಸ್ನೇಹಿತ ಅಂಬರೀಷ್. ಅವರು ಗಳಗಳನೆ ಅಳುತ್ತಾ ಭಾವೋದ್ರೇಕಗೊಳಗಾಗಿದ್ದು, ಪತ್ನಿ-ನಟಿ ಸುಮಲತಾ ಸಮಾಧಾನಗೊಳಿಸಲು ಯತ್ನಿಸುತ್ತಿದ್ದಾರೆ.

ಉಳಿದಂತೆ ಉಪೇಂದ್ರ, ಸುದೀಪ್, ವಿ. ಮನೋಹರ್, ಜಯಂತಿ, ಪ್ರೇಮಾ, ಪ್ರಕಾಶ್ ರೈ, ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸ ಮೂರ್ತಿ ಸೇರಿದಂತೆ ನೂರಾರು ಕಲಾವಿದರು ಮೇರುನಟನ ಅಂತಿಮ ದರ್ಶನ ಮಾಡುತ್ತಿದ್ದಾರೆ. ಮನೋಹರ್ ಒಂದು ಹಂತದಲ್ಲಿ ದುಃಖ ತಡೆಯಲಾಗದೆ ಕುಸಿದು ಬಿದ್ದರೂ, ನಂತರ ಚೇತರಿಸಿಕೊಂಡಿದ್ದಾರೆ.

ಉಡುಪಿ ಪೇಜಾವರ ಶ್ರೀಗಳು, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ಗಣ್ಯರು ಕೂಡ ಸಾಹಸಸಿಂಹನ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದು, ಕುಟುಂಬಕ್ಕೆ ನೋವನ್ನು ತಾಳಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸರಕಾರಗಳಿಂದ ಸಂತಾಪ...
ವಿಷ್ಣುವರ್ಧನ್ ಹಠಾತ್ ನಿಧನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ. ಅವರ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ನೋವನ್ನು ತುಂಬಿಕೊಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಅಂತಿಮ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತನ್ನ ಹೇಳಿಕೆಯಲ್ಲಿ ಕೇಂದ್ರ ಸರಕಾರದ ಪರವಾಗಿ ನಾನು ತೀವ್ರ ಸಂತಾಪ ಸೂಚಿಸುತ್ತಿರುವುದಾಗಿ ಹೇಳಿದ್ದಾರೆ. ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಂತಿಮ ದರ್ಶನ ಪಡೆಯಲು ಹೊರಟಿರುವುದಾಗಿ ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡ ಸಾಹಸ ಸಿಂಹ ವಿಷ್ಣು ಪರಿಚಯ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಕನ್ನಡ ಚಿತ್ರ ನಟ, ಸಾಹಸ ಸಿಂಹ, ಕನ್ನಡ ಸಿನಿಮಾ ಕಲಾವಿದ, ವಿಷ್ಣುವರ್ಧನ್ ನಿಧನ