ನಾನು ನನ್ನ ಪ್ರೀತಿಯ ರಾಮಚಾರಿಯನ್ನು ಕಳೆದುಕೊಂಡಿದ್ದೇನೆ. ಇದನ್ನು ತಡೆದುಕೊಳ್ಳಲಾಗುತ್ತಿಲ್ಲ. ನನ್ನಲ್ಲಿ ಪದಗಳೇ ಸಿಗುತ್ತಿಲ್ಲ. ಆತನ ಸಾವಿನಿಂದಾಗಿ ಚಿತ್ರರಂಗ ಕೇವಲ ಒಬ್ಬ ಶ್ರೇಷ್ಠ ನಟನನ್ನು ಮಾತ್ರ ಕಳೆದುಕೊಂಡದ್ದಲ್ಲ, ಒಬ್ಬ ಉತ್ಕೃಷ್ಟ ಮಾನವತಾವಾದಿಯನ್ನೂ ಕಳೆದುಕೊಂಡಂತಾಗಿದೆ. ಅವನಂತಹ ವ್ಯಕ್ತಿಗಳ ಅಗತ್ಯ ಉದ್ಯಮಕ್ಕಿತ್ತು ಎಂದು ತಿಳಿಸಿದ್ದಾರೆ.
ವಿಷ್ಣುವರ್ಧನ್ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲಿ ಕೆ.ಎಸ್. ಅಶ್ವತ್ಥ್ ಶಿಕ್ಷಕರ ಪಾತ್ರ ಮಾಡಿದ್ದರು. ರಾಮಚಾರಿಯಾಗಿ ಅಭಿನಯಿಸಿದ್ದ ವಿಷ್ಣು ಮೇಸ್ಟ್ರ ನೆಚ್ಚಿನ ಶಿಷ್ಯರಾಗಿದ್ದರು. ಇವರಿಬ್ಬರ ಜೋಡಿ ಹಲವು ದಾಖಲೆಗಳನ್ನೇ ಮುರಿದಿತ್ತು.
ಕೆ.ಎಸ್. ಅಶ್ವತ್ಥ್ ಕೂಡ ಕಳೆದ ಕೆಲವು ವರ್ಷಗಳಿಂದ ಅಸೌಖ್ಯರಾಗಿ ಹಾಸಿಗೆ ಹಿಡಿದಿದ್ದು, ಪ್ರಸಕ್ತ ಚೇತರಿಸಿಕೊಳ್ಳುತ್ತಿದ್ದಾರೆ.
ವಿಷ್ಣು ಆರೋಗ್ಯವಾಗಿಯೇ ಇದ್ದುದರಿಂದ ನನಗಿದು ನಂಬಲಸಾಧ್ಯವಾಗಿತ್ತು. ಸುಗಮ ಸಂಗೀತ ಗಾರುಡಿಗ ಸಿ. ಅಶ್ವತ್ಥ್ ನಿಧನರಾದ ಬೆನ್ನಿಗೆ ವಿಷ್ಣು ಕೂಡ ಅನಿರೀಕ್ಷಿತವಾಗಿ ಅಗಲಿದ್ದು ನಮಗೆ ಎರಡೆರಡು ಆಘಾತಗಳನ್ನು ನೀಡಿದೆ ಎಂದು ವಿಷ್ಣು ಜತೆ ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಜತೆ ಹಲವು ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ ದೇವರನ್ನೇ ದೂರಿದ್ದಾರೆ.
ಅದ್ಭುತ ನಟನನ್ನು ನಮ್ಮಿಂದ ದೂರ ಒಯ್ಯುವ ಮೂಲಕ ದೇವರು ಅನ್ಯಾಯ ಮಾಡಿದ್ದಾರೆ. ರಾಜ್ ಕುಮಾರ್ ಬಳಿಕ ಜನರಿಗೆ ಮಾದರಿಯಾಗಿದ್ದ ವಿಷ್ಣುವರ್ಧನ್ ಅವರದ್ದು ಶ್ರೇಷ್ಠ ವ್ಯಕ್ತಿತ್ವ. ಖಂಡಿತಾ ಇವರಿಬ್ಬರನ್ನು ಕಳೆದುಕೊಂಡಿರುವ ಚಿತ್ರರಂಗ ಅನಾಥವಾಗಿದೆ ಎಂದಿದ್ದಾರೆ.