ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇನ್ನು ನೆನಪು ಮಾತ್ರ: ಪಂಚಭೂತಗಳಲ್ಲಿ ಲೀನವಾದ ವಿಷ್ಣುವರ್ಧನ್ (Vishnuvardhan | Kannada Film Actor | Vishnu Sena | Kannada Cinema)
ಇನ್ನು ನೆನಪು ಮಾತ್ರ: ಪಂಚಭೂತಗಳಲ್ಲಿ ಲೀನವಾದ ವಿಷ್ಣುವರ್ಧನ್
ಭುಗಿಲೆದ್ದ ಹಿಂಸಾಚಾರ-ಕಾರುಗಳಿಗೆ ಬೆಂಕಿ
ಬೆಂಗಳೂರು, ಬುಧವಾರ, 30 ಡಿಸೆಂಬರ್ 2009( 20:10 IST )
NRB
ಅಗಲಿದ ಖ್ಯಾತ ಪಂಚಭಾಷಾ ನಟ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ 3ಸುತ್ತು ಕುಶಾಲುತೋಪು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಸಂಜೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಮೈದಾನದಲ್ಲಿ ನಡೆಯುವ ಮೂಲಕ ವಿಷ್ಣು ದೇಹ ಪಂಚಭೂತಗಳಲ್ಲಿ ಲೀನವಾಯಿತು.
ಶ್ರೀರಂಗಪಟ್ಟಣದ ಜ್ಯೋತಿಷಿ ಭಾನುಪ್ರಕಾಶ್ ನೇತೃತ್ವದಲ್ಲಿ ವಿಷ್ಣುವರ್ಧನ್ ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ವಿಷ್ಣುವರ್ಧನ್ ಅವರ ಚಿತೆಗೆ ಸಹೋದರ ರವಿ ಅವರು ಅಗ್ನಿಸ್ಪರ್ಶ ಮಾಡಿದರು.
ನಗರದ ನ್ಯಾಶನಲ್ ಕಾಲೇಜು ಮೈದಾನದಲ್ಲಿ ವಿಷ್ಣು ಅವರ ಪಾರ್ಥಿವ ಶರೀರರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ವಿಷ್ಣು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಶ್ರುತರ್ಪಣೆ ಅರ್ಪಿಸಿದರು.
ಸಂಜೆ 5ಗಂಟೆ ಸುಮಾರಿಗೆ ಬಸವನಗುಡಿಯಿಂದ ಹೊರಟ ವಿಷ್ಣು ಅವರ ಅಂತಿಮ ಯಾತ್ರೆ ಬನಶಂಕರಿ ಮೂಲಕ ಉತ್ತರಹಳ್ಳಿ ಅಭಿಮಾನ್ ಸ್ಟುಡಿಯೋ ಮೈದಾನಕ್ಕೆ 7ಗಂಟೆ ಹೊತ್ತಿಗೆ ತಲುಪಿತ್ತು. ಇಂದು ಬೆಳಿಗ್ಗೆ ವಿಷ್ಣುವರ್ಧನ್ ಅವರ ಜೀವದ ಗೆಳೆಯ ಅಂಬರೀಶ್ ಅವರು ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಅಭಿಮಾನ್ ಸ್ಟುಡಿಯೋ ಮಾಲೀಕ ದಿವಂಗತ ನಟ ಬಾಲಕೃಷ್ಣ ಅವರ ಪುತ್ರರೊಂದಿಗೆ ಮಾತುಕತೆ ನಡೆಸಿದ್ದರು. ಅದರಂತೆ ಬಾಲಣ್ಣ ಅವರ ಪುತ್ರ ವಿಷ್ಣು ಅಂತ್ಯಕ್ರಿಯೆಗೆ ಎರಡು ಎಕರೆ ಜಾಗವನ್ನು ನೀಡಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು.
ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತ್ ಕುಮಾರ್, ಸಚಿವ ಜನಾರ್ದನ ರೆಡ್ಡಿ, ಆರ್.ಅಶೋಕ್ ಹಾಗೂ ಹಲವು ಸಚಿವರು, ಶಾಸಕರು, ನಟರಾದ ಅಂಬರೀಶ್, ಶ್ರೀನಾಥ್, ಜಯಮಾಲಾ,ಅವಿನಾಶ್, ಮಾಳವಿಕಾ, ಅರ್ಜುನ್ ಸರ್ಜಾ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ರೊಚ್ಚಿಗೆದ್ದ ಉದ್ರಿಕ್ತರಿಂದ ಕಲ್ಲು ತೂರಾಟ: ವಿಷ್ಣು ಅವರ ಕಳೇಬರವನ್ನು ಚಿತೆ ಮೇಲೆ ಇಡುತ್ತಿದ್ದಂತೆಯೇ ಅಭಿಮಾನ್ ಸ್ಟುಡಿಯೋ ಸುತ್ತ ನೆರೆದಿದ್ದ ಸಾವಿರಾರು ಅಭಿಮಾನಿಗಳು ರೊಚ್ಚಿಗೆದ್ದು ಕಲ್ಲು ತೂರಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ನಟ ಅಂಬರೀಶ್ ಅವರು,ಯಾರೂ ಈ ಸಂದರ್ಭದಲ್ಲಿ ಅಹಿತಕರ ವಾತಾವರಣ ನಿರ್ಮಾಣ ಮಾಡಬಾರದು, ಶಾಂತ ರೀತಿಯಿಂದ ಇರುವಂತೆ ಮನವಿ ಮಾಡಿಕೊಂಡರು.
ಕಾರುಗಳಿಗೆ ಬೆಂಕಿ: ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡಬಾರದು ಎಂಬ ಮನವಿಯ ನಡುವೆಯೇ ಅಭಿಮಾನ್ ಸ್ಟುಡಿಯೋ ಹೊರಭಾಗದಲ್ಲಿ ನೆರೆದಿದ್ದ ಅಭಿಮಾನಿಗಳ ಉದ್ರಿಕ್ತರ ಗುಂಪು 3 ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದು, ಹಿಂಸಾಚಾರ ಭುಗಿಲೆದ್ದಿತ್ತು.
ಶಂಕರಪುರದ ಬಳಿ ಮಚ್ಚು ಹಿಡಿದ ದುಷ್ಕರ್ಮಿಗಳ ಓಡಾಟ, ಬಸವನಗುಡಿಯ ಎಟಿಎಂ ಧ್ವಂಸ, ರಾಮಕೃಷ್ಣ ಆಶ್ರಮ ಬಳಿಯ ಖಾಸಗಿ ಹೋಟೆಲ್‌ಗೆ ನುಗ್ಗಿ ಕಾರ್ಮಿಕರನ್ನು ಬಡಿದು ಕ್ಯಾಶಿನಲ್ಲಿದ್ದ ಹಣ ದರೋಡೆ ಮುಂತಾದ ಪ್ರಕರಣಗಳು ವರದಿಯಾಗಿವೆ.