ಕನ್ನಡ ಚಿತ್ರರಂಗದ ಒಂದು ಪೀಳಿಗೆಯ ಮತ್ತೊಂದು ಕೊಂಡಿ ಇಂದು ಯಾವುದೇ ಪೂರ್ವ ಸುಳಿವನ್ನೂ ನೀಡದೆ ಕಳಚಿಕೊಂಡಿದೆ. ಇದರ ಬಗ್ಗೆ ಆಘಾತ ವ್ಯಕ್ತಪಡಿಸಿದವರು ನೂರಾರು ಮಂದಿ. ಯಾರಿಗೂ ನೋವು ಕೊಡದ ವಿಷ್ಣುವರ್ಧನ್ ಅವರ ಹೃದಯ ವೈಶಾಲ್ಯತೆಯನ್ನು ಮೆಚ್ಚಿಕೊಳ್ಳದವರೇ ಇಲ್ಲ. ಅಗಲಿಕೆಯ ನೋವನ್ನು ಹಂಚಿಕೊಂಡ ಕಲಾವಿದರ ಮಾತುಗಳನ್ನು ಇಲ್ಲಿ ನೀಡಲಾಗಿದೆ.
ಅಂಬರೀಷ್: ಸಿ. ಅಶ್ವತ್ಥ್ ನಿಧನರಾದಾಗ ನಾನೇ ಫೋನ್ ಮಾಡಿ ಆತನಿಗೆ ಹೇಳಿದ್ದೆ. ನಿಂಗೆ ಹುಷಾರಿಲ್ಲ, ಬರೋದು ಬೇಡ, ಅಲ್ಲೇ ಇದ್ದು ಟೀವೀಲಿ ನೋಡು ಅಂದಿದ್ದೆ. ಇಂದು ನೋಡಿದ್ರೆ ಆತನೇ ನಮ್ಮೆದುರಿಲ್ಲ. ಏನ್ಮಾಡ್ಲಿ, ದೇವರು ಇಂದು ಅವನನ್ನು ಕರ್ಕೊಂಡು ಹೋಗಿದ್ದಾನೆ. ನಾಳೆ ನಮ್ಮನ್ನು, ಸ್ವಲ್ಪ ತಡ ಆಗಬಹುದು ಅಷ್ಟೇ.
ಜಯಂತಿ: ವಿಷ್ಣುವರ್ಧನ್‌ರನ್ನು ಕರೆಸಿಕೊಳ್ಳಲು ದೇವರಿಗೆ ಇಷ್ಟು ಆತುರ ಯಾಕೋ? ಅವರಿನ್ನೂ ಬಾಳಿ ಬದುಕಬೇಕಾಗಿದ್ದವರು. ದಿನಕ್ಕೊಬ್ಬರು ಸಾವಿಗೀಡಾಗುತ್ತಿದ್ದಾರೆ. ಚಿತ್ರರಂಗದ ಗತಿಯ ಬಗ್ಗೆಯೇ ಚಿಂತೆಯಾಗುತ್ತಿದ್ದು, ನಾಳಿನ ಬಗ್ಗೆ ಊಹಿಸಲೂ ಕಷ್ಟವಾಗುತ್ತಿದೆ.
ಪ್ರೇಮ್-ನಿರ್ದೇಶಕ: ಅವರ ಪ್ರೀತಿಯನ್ನು ಹೇಗೆ ಮರೆಯಲಿ. ಹೆಚ್ಚಿನವರಿಗೆ ಅವರು ಆದರ್ಶಪ್ರಾಯವಾಗಿದ್ದವರು. ಅಗಲಿಕೆಯನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.
ರಮೇಶ್: ಅವರ ಜತೆ ಕೆಲಸ ಮಾಡಿದ ನಾನು ಪುಣ್ಯವಂತ. ಅವರು ಆಪ್ತಮಿತ್ರ ಇದ್ದಂತೆ. ಅವರ ನಡೆ-ನುಡಿ ಎಲ್ಲವೂ ಸ್ಪಷ್ಟ. ಯಾವುದೇ ಕೆಲಸವಿದ್ದರೂ ಅಪಾರ ಶ್ರದ್ಧೆ ಎದ್ದು ಕಾಣುತ್ತಿತ್ತು. ಖಂಡಿತಾ ಕನ್ನಡ ನಾಡಿಗಿದು ಬಲುದೊಡ್ಡ ನಷ್ಟ.
ಶಿವರಾಜ್ ಕುಮಾರ್: ವಿಷ್ಣುವರ್ಧನ್ ಇಲ್ಲದ ಕನ್ನಡ ಚಿತ್ರರಂಗ ಅನಾಥವಾಗಿದೆ. ಅವರ ಜತೆ ನಟಿಸಬೇಕೆನ್ನುವ ಆಸೆಯೂ ಈಡೇರಿಲ್ಲ. ಮಾವ ಎಂದೇ ಕರೆಯುತ್ತಿದ್ದ ನನಗೆ ಅವರ ಅಕಾಲಿಕ ಅಗಲಿಕೆ ಬಹುದೊಡ್ಡ ಆಘಾತ.
ಚಿರಂಜೀವಿ, ತೆಲುಗು ನಟ: ಶ್ರೇಷ್ಠ ನಟರಲ್ಲೊಬ್ಬರಾದ ವಿಷ್ಣು ಅವರ ಅಕಾಲಿಕ ನಿಧನ ನನಗೆ ತೀವ್ರ ಆಘಾತ ನೀಡಿದೆ. ಅತ್ಯುತ್ತಮ ಸ್ನೇಹ ಜೀವಿಯಾಗಿದ್ದ ಅವರ ಸ್ನೇಹವನ್ನು ಪಡೆದ ನಾನು ಪುಣ್ಯವಂತ. ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ.
ರಮ್ಯಾ: ಈ ಸುದ್ದಿ ಕೇಳಿದಾಗಿನಿಂದ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಬಹು ದೊಡ್ಡ ಶಾಕ್. ಅವರು ಇನ್ನೂ ಹಲವು ವರ್ಷ ಬದುಕಬೇಕಾಗಿದ್ದವರು.
ತಾರಾ: ಅವರ ತಂಗಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ ನನಗೆ ನಿಜಕ್ಕೂ ಅವರು ಅಣ್ಣನಾಗಿದ್ದವರು. ನನ್ನ ಕಷ್ಟಗಳಿಗೆ ಸಲಹೆ ನೀಡಿದ ಅವರೇ ಇಲ್ಲದ ಪ್ರಪಂಚವೀಗ ನನಗೆ ಕತ್ತಲಾಗಿ ಕಾಣುತ್ತಿದೆ.