ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆತ ರಾಮಾಚಾರಿ, ಈತ ಜಲೀಲ್: ಇಬ್ಬರೂ ಪ್ರಾಣ ಸ್ನೇಹಿತರು (Vishnuvardhan | Sahasa Simha | Ambarish | Raj Kumar)
ಸುದ್ದಿ/ಗಾಸಿಪ್
Bookmark and Share Feedback Print
 
Ambarish - Vishnu
PR
ಅವರಿಬ್ಬರ ವ್ಯಕ್ತಿತ್ವಗಳು ಭಿನ್ನ. ಯಾವ ವಿಚಾರದಲ್ಲಿ ನೋಡಿದರೂ ಸಂಬಂಧವನ್ನು ಕಲ್ಪಿಸಲು ಸಾಧ್ಯವೇ ಆಗುತ್ತಿಲ್ಲ. ಆದರೂ ಅವರು ಆಪ್ತ ಸ್ನೇಹಿತರು. ಹೋಗೋ-ಬಾರೋ ಅನ್ನುವಷ್ಟು ಪ್ರೀತಿಯನ್ನು ಹೃದಯದಿಂದಲೇ ಧಾರೆಯೆರೆದು ಪರಸ್ಪರ ಕರಗಿಕೊಳ್ಳುತ್ತಿದ್ದವರು.

ಇದು ವಿಷ್ಣುವರ್ಧನ್ ಮತ್ತು ಅಂಬರೀಷ್ ನಡುವಿನ ಸ್ನೇಹದ ಮಾತುಗಳು, ನಡೆದುಬಂದ ದಾರಿ-- ಕೊನೆಗೆ ವಿಷ್ಣು ಇಹಲೋಕ ತ್ಯಜಿಸುವವರೆಗೂ ಜತೆಗಿದ್ದ ಜೀವದ ಹೊರಗೆ ಬಾರದ ನೋವುಗಳ ಭಾಷ್ಯ.

ವಿಷ್ಣುವರ್ಧನ್ ಸಾಧು, ಯಾವತ್ತೂ ಮತ್ತೊಬ್ಬರಿಗೆ ನೋವಾಗುವಂತೆ ಗಟ್ಟಿಯಾಗಿ ಮಾತನಾಡುವ ಸ್ವಭಾವದವರಲ್ಲ. ಯಾವ ಕೆಲಸ ಮಾಡುವುದಿದ್ದರೂ ಮತ್ತೊಬ್ಬರಿಗೆ ತಿಳಿಯದಂತೆ ಕೈಗೊಳ್ಳುವುದು ಅವರ ಸ್ಪೆಷಾಲಿಟಿ. ಗುಂಡು-ಸಿಗರೇಟುಗಳಿಂದ ಸದಾ ದೂರ. ರಾಜಕೀಯದ ಪಥ್ಯವೇ ಅವರಿಗಿರಲಿಲ್ಲ.

ಇದಕ್ಕೆ ಸಂಪೂರ್ಣ ಭಿನ್ನವೆನ್ನುವ ವ್ಯಕ್ತಿತ್ವ ಅಂಬರೀಷ್ ಅವರದ್ದು. ಪ್ರಾಣವನ್ನಾದರೂ ಕೊಟ್ಟೇನು-- ಸಿಗರೇಟು, ಗುಂಡು ಬಿಡಲಾರೆ ಎಂಬ ಮನೋಸ್ಥಿತಿ. ಅಬ್ಬರದ ಮಾತುಗಳಿಗೇ ಪ್ರಸಿದ್ಧಿ. ಮತ್ತೊಬ್ಬರನ್ನು ಮನಸಾರೆ ಅಲ್ಲದಿದ್ದರೂ ತೋರಿಕೆಗೆ ಗದರಿಸಿ, ಗೌಜಿ ಎಬ್ಬಿಸಿ ಕೆಲಸ ಮಾಡಿಸಿಕೊಳ್ಳುವ ಛಾತಿ ಉಳ್ಳವರು. ರಾಜಕೀಯ, ಕುದುರೆ ರೇಸ್ ಅವರಿಗೆ ಸಂತಸ ಕೊಡುವ ಮತ್ತೆರಡು ಕ್ಷೇತ್ರಗಳು.

ಆದರೆ ಇಬ್ಬರೂ ಹೃದಯದಲ್ಲಿ ಶ್ರೀಮಂತರಾಗಿದ್ದರು ಎನ್ನುವುದೊಂದು ಅಪವಾದ. ವಿಷ್ಣು-ಅಂಬಿಯವರ ಆಂತರ್ಯದಲ್ಲಿ ಪ್ರೀತಿಗೆ ಎಕರೆಗಟ್ಟಲೆ ಜಾಗವಿತ್ತು. ಮೈಲುಗಟ್ಟಲೆ ಮಾತನಾಡುತ್ತಾ ನಡೆದರೂ ಮುಗಿಯದ ವಿಚಾರಗಳು ಅವರಲ್ಲಿ ಹಂಚಿಕೊಳ್ಳಲು ಉಳಿಯುತ್ತಿದ್ದವು.
PR


ಇಬ್ಬರಿಗೂ ಗುರು ಪುಟ್ಟಣ್ಣ ಕಣಗಾಲ್. ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರು ರಾಮಾಚಾರಿಯಾಗಿ ನಾಯಕನಾದರೆ, ಅಂಬರೀಷ್ ಜಲೀಲ್ ಎಂಬ ಖಳನಾಗಿ ಕಾಣಿಸಿಕೊಂಡವರು. ಇಬ್ಬರದ್ದೂ ಚಿತ್ರದುದ್ದಕ್ಕೂ ಒರಟು ವ್ಯಕ್ತಿತ್ವ.

ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಜತೆಯಾಗಿ ಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡು ಬಂದವರು. ಜನಪ್ರಿಯತೆಯಲ್ಲಿ ಒಬ್ಬರನ್ನೊಬ್ಬರು ಮೀರಿಸಿದರೂ, ಅಂತಿಮವಾಗಿ ವಿಷ್ಣುವೇ ಒಂದು ಕೈ ಮೇಲೆಂಬುದನ್ನು ಸ್ವತಃ ಅಂಬಿಯೇ ಹೇಳಿಕೊಂಡದ್ದು ನೆನಪು.

ಹೀಗೆ ಈ ಅಪರಿಮಿತ ಪ್ರೀತಿಯನ್ನು ಬೆಳ್ಳಿತೆರೆಯಲ್ಲೂ ಅಜರಾಮರವಾಗಿಸಲು ಚಿತ್ರವೊಂದನ್ನು ಮಾಡಬೇಕೆಂಬ ಕನಸು ಅಂಬಿಯದ್ದು. ಅದೇ ಕಾರಣಕ್ಕಾಗಿ ರೂಪುಗೊಂಡದ್ದು 'ದಿಗ್ಗಜರು' ಎಂಬ ಚಿತ್ರ. ಈ ಚಿತ್ರದಲ್ಲಿ ಮೂಲ ಸ್ವಭಾವವನ್ನು ಬಿಂಬಿಸುವ ಪಾತ್ರಗಳಲ್ಲಿ ಇಬ್ಬರೂ ನಟಿಸಿ ಗಮನ ಸೆಳೆದದ್ದು ಈಗಲೂ ಕಣ್ಣಿಗೆ ಕಟ್ಟುತ್ತಿದೆ. ಅಂಬಿಯ ಮಡಿಲಲ್ಲಿ ವಿಷ್ಣು ಪ್ರಾಣ ಬಿಡುವ ಪ್ರಸಂಗವನ್ನು ಮರೆಯಲು ಸಾಧ್ಯವೇ ಇಲ್ಲ.

ಯಾವುದೇ ಕಾರ್ಯಕ್ರಮವಿರಲೀ, 'ಬರ್ತೀಯೇನೋ?' ಎಂದು ಗದರಿಸಿಯೇ ವಿಷ್ಣುವನ್ನು ಹೊರಡಿಸುವ ಅಭ್ಯಾಸವಿಟ್ಟುಕೊಂಡಿದ್ದ ಅಂಬರೀಷ್, ರಾಜಕಾರಣಕ್ಕೆ ಎಳೆದುತರಲು ಯತ್ನಿಸಿದ್ದರೂ ಸಫಲರಾಗಿರಲಿಲ್ಲ.

ಅಂತಹ ಜಿಗಿರಿ ದೋಸ್ತ್ ಅಂಬಿಯನ್ನೀಗ ಏಕಾಂಗಿಯನ್ನಾಗಿ ಮಾಡಿದ್ದಾರೆ ವಿಷ್ಣು...

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಸಾಹಸಸಿಂಹ, ಅಂಬರೀಷ್, ರಾಜ್ಕುಮಾರ್, ಕನ್ನಡ ಸಿನಿಮಾ