ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಯಜಮಾನ'ನಿಲ್ಲದ ಮನೆ ಭಣಗುಡುತ್ತಿದೆ; ಮೌನ ಮೆರೆಯುತ್ತಿದೆ (Vishnuvardhan | Kannada film | Sahasasimha | Ravi)
ಸುದ್ದಿ/ಗಾಸಿಪ್
Bookmark and Share Feedback Print
 
ಮೊನ್ನೆ ಮೊನ್ನೆಯವರೆಗೆ ಉಂಡು-ಮಲಗಿದ್ದ ಜೀವವನ್ನು ಕಳೆದುಕೊಂಡ ನೋವು ಆ ಮನೆಯ ಗೋಡೆಗಳೂ ಅನುಭವಿಸುತ್ತಿವೆ, ಮೌನವಾಗಿ ರೋಧಿಸುತ್ತಿವೆ. 'ಯಜಮಾನ' ವಿಷ್ಣುವರ್ಧನ್‌ ನಮ್ಮನ್ನು ಬಿಟ್ಟು ಹಿಂತಿರುಗಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ ಎಂಬುವುದನ್ನು ಅರಗಿಸಿಕೊಳ್ಳಲು ಆಪ್ತರು, ಸಂಬಂಧಿಕರು ಇನ್ನೂ ಪರದಾಡುತ್ತಿದ್ದಾರೆ.

ತನ್ನ ಸಿನಿಮಾ ಜೀವನದ ಆರಂಭದಲ್ಲಿ ಕಟ್ಟಿಸಲಾಗಿದ್ದ ಬೆಂಗಳೂರಿನ ಈ ಮನೆಗೆ ವಿಷ್ಣು ತನ್ನ ತಾಯಿ ಕಮಾಲಾಕ್ಷಮ್ಮ ಅವರ ಹೆಸರನ್ನೇ ಇಟ್ಟಿದ್ದರು. ಮೈಸೂರು, ಚೆನ್ನೈ ಎಂದೆಲ್ಲಾ ತಿರುಗಾಡಿಕೊಂಡಿದ್ದ ವಿಷ್ಣು ಬೆಂಗಳೂರಿನ ಈ ಮನೆಯಲ್ಲಿರುತ್ತಿದ್ದುದು ತಿಂಗಳಲ್ಲಿ ಕೆಲವು ದಿನ ಮಾತ್ರ.
Vishnu
PR


ಅಂತಹ ಮನೆಯೀಗ ಭಣಗುಡುತ್ತಿದೆ. ಸದಾ ಆಧ್ಯಾತ್ಮಿಕ ಚಿಂತನೆಯನ್ನೇ ಹೊತ್ತುಕೊಂಡಿದ್ದರೂ ಹಾಸ್ಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ವಿಷ್ಣುವಿಲ್ಲದ ಆ ಮನೆಯನ್ನೀಗ ನೀರವ ಮೌನವೇ ಆಳುತ್ತಿದೆ.

ವಿಷ್ಣುವಿನ ಜೀವಂತ ಚಿತ್ರಗಳನ್ನು ಮನೆಯ ಗೋಡೆಗಳಲ್ಲಿ, ಹೊರಾಂಗಣದಲ್ಲಿ ತೂಗು ಹಾಕಿ ಹೂವಿನ ಮಾಲೆಗಳನ್ನು ಹಾಕಲಾಗಿದೆ. ಅವರ ಅಗಲಿಕೆ ನಷ್ಟವನ್ನು, ಅವರ ಇರುವಿಕೆಯನ್ನು ತುಂಬುವ ಶಕ್ತಿ ಇನ್ಯಾರಿಗಿದೆ ಎಂದೆಲ್ಲ ಆಪ್ತರು ಅನಾಥರಾದವರಂತೆ ಪ್ರಶ್ನಿಸುತ್ತಿದ್ದಾರೆ.

ಅಭಿಮಾನಿಗಳಿಂದ ಮೌನ ರೋಧನ...
ನಿನ್ನೆ ರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆಸುವ ಸಂದರ್ಭದಲ್ಲಿ ಸ್ಥಳಕ್ಕೆ ಬರಲಾಗದ ಅಭಿಮಾನಿಗಳು ರಾತ್ರಿಯಿಡೀ ಬಂದು ಹೋಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಮಕ್ಕಳು-ಮಹಿಳೆಯರೆನ್ನದೆ ತಡರಾತ್ರಿಯೂ ಅಭಿಮಾನಿಗಳು ಸ್ಟುಡಿಯೋದತ್ತ ತೆರಳಿ ಚಿತೆಯನ್ನು ನೋಡಿ ಕಣ್ಣೀರು ಹಾಕುತ್ತಿದ್ದರು. ಇಂದು ಕೂಡ ಇದು ಮುಂದುವರಿದಿದೆ.

ಸ್ಟುಡಿಯೋದೊಳಗೆ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಯಾರಿಗೂ ಪ್ರವೇಶ ನೀಡದಿದ್ದ ಕಾರಣ ಅಭಿಮಾನಿಗಳು ನಿರಾಸೆಗೊಂಡಿದ್ದರು. ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಮುಗಿದು, ಆಪ್ತರು-ಸಂಬಂಧಿಕರು ಸ್ಥಳದಿಂದ ತೆರಳಿದ ಬಳಿಕವಷ್ಟೇ ಅಭಿಮಾನಿಗಳು ಸ್ಥಳಕ್ಕೆ ತೆರಳಲು ಸಾಧ್ಯವಾಗಿತ್ತು.

ಸಮಾಧಾನದಿಂದಿರಿ- ಸಹೋದರ ಮನವಿ....
ಅದೇ ಹೊತ್ತಿಗೆ ಭಾರತಿ ಮನವಿ ಮಾಡಿಕೊಂಡ ಹೊರತಾಗಿಯೂ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದ ಬಗ್ಗೆ ವಿಷ್ಣು ಹಿರಿಯ ಸಹೋದರ ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆತ ಬೇರೆಯವರ ಕಷ್ಟಗಳಿಗೆ ಸದ್ದಿಲ್ಲದೆ ಸ್ಪಂದಿಸುವ ವ್ಯಕ್ತಿತ್ವದವ. ಯಾರನ್ನೂ ನೋಯಿಸದೆ ಸಂತಸದಿಂದಿಡಲು ಯತ್ನಿಸುವ ಮನಸ್ಸು ವಿಷ್ಣುವಿನದ್ದು. ಅಂತಹ ದೇವತಾ ಮನುಷ್ಯನನ್ನು ಕಳುಹಿಸಿಕೊಡುವಾಗ ಅಭಿಮಾನಿಗಳು ಈ ರೀತಿಯ ಅತಿರೇಕಗಳಿಗೆ ಮುಂದಾಗಬಾರದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮತ್ತೆ ಮನವಿ ಮಾಡಿಕೊಂಡಿರುವ ರವಿ, ವಿಷ್ಣು ನಮ್ಮ-ನಿಮ್ಮಂತೆ ತೀರಾ ಸಿಂಪಲ್ ವ್ಯಕ್ತಿ; ಯಾವತ್ತೂ ಆಡಂಭರವನ್ನು ಬಯಸಿದವನಲ್ಲ. ದಯವಿಟ್ಟು ಆತನ ಆತ್ಮಕ್ಕೆ ಶಾಂತಿ ಸಿಗಲು ಮೌನದಿಂದಿರಿ. ಗೌಜಿ-ಗಲಭೆಗಳಿಗೆ ಆಸ್ಪದ ನೀಡಬೇಡಿ. ಇದರಿಂದ ಆತನಿಗೆ ಸಂತಸ ಸಿಗದು, ನೆಮ್ಮದಿಯಾಗದು ಎಂದು ಕೋರಿದ್ದಾರೆ.

ವಿಷ್ಣು ಅಕಾಲಿಕ ನಿಧನವನ್ನು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ನಿನ್ನೆ ಅತಿರೇಕದ ವರ್ತನೆಗಳನ್ನು ತೋರಿಸಿದ್ದರು. ವಾಹನಗಳಿಗೆ ಬೆಂಕಿ, ಕಲ್ಲೆಸೆತ, ಪೊಲೀಸರ ಮೇಲೆ ಹಲ್ಲೆ, ಅಂಗಡಿ-ಮುಂಗಟ್ಟುಗಳಿಗೆ ಹಾನಿ, ರಸ್ತೆ ವಿಭಾಜಕಗಳ ಧ್ವಂಸ ಹೀಗೆ ಹಿಂಸಾತ್ಮಕ ಪ್ರತಿಭಟನೆಗಳಿಗೆ ಮುಂದಾಗಿದ್ದರು. ಕೆಲವೆಡೆ ಆತ್ಮಹತ್ಯೆ, ಯತ್ನಗಳು ನಡೆದ ಬಗ್ಗೆಯೂ ವರದಿಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಕನ್ನಡ ಸಿನಿಮಾ, ಸಾಹಸಸಿಂಹ, ರವಿ, ಕರ್ನಾಟಕ, ಬೆಂಗಳೂರು