ವಿಷ್ಣುವರ್ಧನ್ ಜತನದಿಂದ ಕಾಯ್ದುಕೊಂಡಿದ್ದ ವಾಚ್ ಸಮಾಧಿ ಸ್ಥಳದಲ್ಲಿ ಪತ್ತೆಯಾಗುವ ಮೂಲಕ ಭಾರತಿ ಸೇರಿದಂತೆ ಕುಟುಂಬದವರ ಮುಖದಲ್ಲಿ ನಗು ಮಿಂಚಿನಂತೆ ಸುಳಿದು ಹಳೆ ನೆನಪುಗಳನ್ನು ಮೆಲುಕು ಹಾಕಿದರೂ, ಕ್ಷಣದಲ್ಲೇ ದುಃಖ ಉಮ್ಮಳಿಸಿದ ಪ್ರಸಂಗಕ್ಕೆ ಹಲವರು ಸಾಕ್ಷಿಯಾದರು.
ವಿಷ್ಣು ಇಹಲೋಕ ತ್ಯಜಿಸಿದ ಮರುದಿನ ಸಮಾಧಿ ಸ್ಥಳಕ್ಕೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ತೆರಳಿದ್ದ ಪತ್ನಿ ಭಾರತಿ, ಪುತ್ರಿ ಕೀರ್ತಿಯವರು ಗುರುವಾರ ಈ ಸಖೇದಾಶ್ಚರ್ಯಕ್ಕೆ ಒಳಗಾಗಬೇಕಾಯಿತು.
ಸಮಾಧಿಗೆ ಪೂಜೆ ಸಲ್ಲಿಸಲೆಂದು ದುಃಖತಪ್ತ ಕುಟುಂಬಸ್ತರು ಇಂದು ಅಭಿಮಾನ್ ಸ್ಟುಡಿಯೋಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಮಾಧಿ ಸ್ಥಳದಲ್ಲಿ ಪತ್ತೆಯಾದ ಕೈ ಗಡಿಯಾರವನ್ನು ಪುರೋಹಿತರು ಕುಟುಂಬಿಕರಿಗೆ ಹಸ್ತಾಂತರಿಸಿ ಅಚ್ಚರಿ ಮೂಡಿಸಿದರು.
ಕುತೂಹಲದಿಂದ ಪರಿಶೀಲಿಸಿದ ಸಂಬಂಧಿಕರಿಗೆ ವಿಷ್ಣು ಆ ವಾಚಿನ ಜತೆ ಹೊಂದಿದ್ದ ಅವಿನಾಭಾವ ಸಂಬಂಧ ನೆನಪಿಗೆ ಬಂದು ನಗುವೊಂದು ಮಿಂಚಿನಂತೆ ಸುಳಿದಾಡಿತು. ಆದರೆ ಅದು ಕೇವಲ ಕ್ಷಣಿಕವಾಗಿತ್ತು. ವಿಷ್ಣು ಈಗ ನಮ್ಮ ಜತೆಗಿಲ್ಲ ಎಂಬುದು ತಕ್ಷಣವೇ ಗಮನಕ್ಕೆ ಬಂದಾಗ ಒಬ್ಬರ ಹೆಗಲನ್ನು ಮತ್ತೊಬ್ಬರು ಹಿಡಿದುಕೊಂಡು ಗೋಳೋ ಎಂದು ಅತ್ತೇ ಬಿಟ್ಟರು.
ಈ ಕೈ ಗಡಿಯಾರದ ಬಗ್ಗೆ ವಿಷ್ಣು ಅಪಾರ ಪ್ರೀತಿ ಹೊಂದಿದ್ದರು. ಎಲ್ಲೇ ಹೋಗುವುದಿದ್ದರೂ ಅದನ್ನು ಕಟ್ಟಿಕೊಂಡು ಹೋಗುವುದು ಮತ್ತು ಜತನವಾಗಿ ನೋಡಿಕೊಳ್ಳುವುದನ್ನು ತಪ್ಪಿಸುತ್ತಿರಲಿಲ್ಲ. ಮಲಗುವಾಗಲೂ ಬಿಚ್ಚಿಡದೆ ಜತೆಗಿಟ್ಟುಕೊಳ್ಳಲು ಇಷ್ಟಪಡುತ್ತಿದ್ದ ಅವರಿಗೆ ಅದರ ಜತೆ ಭಾವನಾತ್ಮಕ ಸಂಬಂಧವಿತ್ತು.
ಈ ವಾಚ್ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕೈಯಲಿತ್ತೇ ಎಂಬ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. ವಾಚ್ ಸಂಜೆ 6.45ಕ್ಕೆ ಕೆಲಸ ನಿಲ್ಲಿಸಿರುವುದನ್ನು ಸೂಚಿಸುತ್ತಿದೆ. ಅಸ್ಥಿ ಮಧ್ಯೆ ವಾಚ್ ಸಿಕ್ಕಿತ್ತು ಎಂದು ಪುರೋಹಿತರು ತಿಳಿಸಿದ್ದಾರೆ.
ಚಿತಾಭಸ್ಮವನ್ನು ಸಮಾಧಿ ಸ್ಥಳದಿಂದ ಕುಟುಂಬಸ್ಥರು ಪಡೆದುಕೊಂಡು ಬಳಿಕ ಶ್ರೀರಂಗಪಟ್ಟಣದ ಪ್ರಸನ್ನ ನಂಜುಡೇಶ್ವರ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಭಾರತಿ, ನಟ ಶಿವರಾಂ, ಅಳಿಯ ಅನಿರುದ್ಧ್, ವಿಷ್ಣುವಿನ ಪ್ರೀತಿಯ ಅಡುಗೆ ಕೆಲಸಗಾರ ಶ್ರೀಧರ್ ಜತೆಗಿದ್ದರು.