ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರೇಷ್ಠ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ: ಅಕ್ಷಯ್, ರಜನಿ (Vishnuvardhan | Rajinikanth | Akshay Kumar | Sahasasimha)
ಸುದ್ದಿ/ಗಾಸಿಪ್
Bookmark and Share Feedback Print
 
Vishnuvardhan
MOKSHA
ಸಾಹಸಸಿಂಹ ವಿಷ್ಣುವರ್ಧನ್ ಅಕಾಲಿಕ ಮರಣಕ್ಕೆ ಆಘಾತ ವ್ಯಕ್ತಪಡಿಸಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಶ್ರೇಷ್ಠ ನಟ-ವ್ಯಕ್ತಿಯೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಷ್ಣು ಇನ್ನಿಲ್ಲವೆಂಬುದನ್ನು ನನಗೆ ನಂಬಲಾಗುತ್ತಿಲ್ಲ. ಅವರು ಅಸ್ತಂಗತರಾಗುವ ಕೆಲವೇ ದಿನಗಳ ಹಿಂದಷ್ಟೇ ನಾನು ಅವರ ಜತೆ ಮಾತನಾಡಿದ್ದೆ. ನನ್ನ ಅತ್ಯುತ್ತಮ ಗೆಳೆಯರಲ್ಲೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ವಿಷ್ಣು ಶ್ರೇಷ್ಠ ನಟ ಮತ್ತು ವ್ಯಕ್ತಿತ್ವದವರಾಗಿದ್ದರು ಎಂದು ರಜನಿ ತಿಳಿಸಿದ್ದಾರೆ.

ಅವರೊಂದಿಗೆ ಕಳೆದ ದಿನಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿವೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Rajanikanth
PR


ಭದ್ರತಾ ಕಾರಣಗಳಿಂದಾಗಿ ಶ್ರೇಷ್ಠ ನಟನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಬೆಂಗಳೂರಿಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲಿದ್ದೇನೆ ಎಂದು ನುಡಿದರು.

ವಿಷ್ಣು ಮತ್ತು ರಜನಿ 'ಶ್ರೀ ರಾಘವೇಂದ್ರ' ಮತ್ತು 'ವಿದುತಾಲೈ' ಮುಂತಾದ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಅಲ್ಲದೆ 2005ರ ಸೂಪರ್ ಡ್ಯೂಪರ್ ಹಿಟ್ ಚಿತ್ರ 'ಚಂದ್ರಮುಖಿ' ಚಿತ್ರ ವಿಷ್ಣು ಅಭಿನಯದ 'ಆಪ್ತಮಿತ್ರ'ದ ರೀಮೇಕ್ ಆಗಿತ್ತು.

ಅಕ್ಷಯ್‌ಗೂ ಆಘಾತ...
ಗೋವಾದಲ್ಲಿ ರಜಾ ದಿನ ಕಳೆಯಲು ಬಂದಿರುವ ಅಕ್ಷಯ್ ಕುಮಾರ್ ಕೂಡ ವಿಷ್ಣು ಅಕಾಲಿಕ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
Akshay - Vishnu
PR


ನಾನು ವಿಷ್ಣು ಜತೆ 'ಅಶಾಂತ್' ಚಿತ್ರದಲ್ಲಿ ನಟಿಸಿದ್ದೆ. ಬಹುಶಃ ವಿಷ್ಣು ಹಿಂದಿಯಲ್ಲಿ ನಟಿಸಿದ ಏಕೈಕ ಚಿತ್ರ ಇದು ಮಾತ್ರ. ಈ ಚಿತ್ರವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿತ್ತು. ಆ ಸಂದರ್ಭದಲ್ಲೇ ಅವರು ಭಾರೀ ಪ್ರಸಿದ್ಧಿ ಪಡೆದಿದ್ದರು. ಅವರನ್ನು ಮುಟ್ಟಲೆಂದು ಮಕ್ಕಳು, ಮಹಿಳೆಯರು ಮತ್ತು ಯುವಕರು ಕಾತರದಿಂದ ಕಾಯುತ್ತಿದ್ದರು. ಅವರನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಿದ್ದರು. ಹುಟ್ಟಿದ ಮಕ್ಕಳಿಗೂ ಅವರ ಹೆಸರನ್ನು ಇಡಲಾಗುತ್ತಿತ್ತು ಎಂದು ತನ್ನ ನೆನಪಿನ ಬುತ್ತಿಯನ್ನು ಅಕ್ಷಯ್ ಬಿಚ್ಚಿದ್ದಾರೆ.

ಹಿಂದಿಯಲ್ಲಿ 'ಅಶಾಂತ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಕನ್ನಡದಲ್ಲಿ 'ವಿಷ್ಣು ವಿಜಯ' ಎಂಬ ಹೆಸರಿನಲ್ಲಿ ಸೂಪರ್ ಹಿಟ್ ಆಗಿತ್ತು.

ವಿಷ್ಣೂಜೀಯವರು ಅಪಾರ ಶಿಸ್ತನ್ನು ಮೈಗೂಡಿಸಿಕೊಂಡವರು. ಅಲ್ಲದೆ ಶ್ರಮಜೀವಿ ಕೂಡ. ಹಲವು ಪಾಠಗಳನ್ನು ಅವರಿಂದ ಕಲಿತಿದ್ದೇನೆ. ನಾವು ಕನ್ನಡ ಮತ್ತು ಹಿಂದಿ ಚಿತ್ರವನ್ನು ಜತೆಯಾಗಿ ಮಾಡಿದ್ದೆವು. ಕನ್ನಡ ಸೂಪರ್ ಹಿಟ್ ಆಗಿದ್ದರೆ, ಹಿಂದಿ ಫ್ಲಾಪ್ ಆಗಿತ್ತು. ಆ ಸಂದರ್ಭದಲ್ಲೇ ಅವರು ನನಗಿಂತ ದೊಡ್ಡ ಸ್ಟಾರ್ ಆಗಿದ್ದರು. ಆ ಬಳಿಕವೂ ಅವರನ್ನು ನಾನು ಭೇಟಿ ಮಾಡಿದ್ದೆ. ಖಂಡಿತಾ ಅವರಿಗೆ ಸಾಯುವ ವಯಸ್ಸಾಗಿರಲಿಲ್ಲ ಎಂದು ಅಕ್ಷಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ರಜನಿಕಾಂತ್, ಅಕ್ಷಯ್ ಕುಮಾರ್, ಸಾಹಸಸಿಂಹ, ಕನ್ನಡ ಸಿನಿಮಾ, ಬಾಲಿವುಡ್, ತಮಿಳು