ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶ್ರೀಧರ್, ರಾಧಾಕೃಷ್ಣ ಬಿಚ್ಚಿಟ್ಟ ವಿಷ್ಣು ಮನೆಯ ಕಥೆ! (Vishnuvardhan | Radhakrishna | Shridhar)
ಸುದ್ದಿ/ಗಾಸಿಪ್
Bookmark and Share Feedback Print
 
PR
ವಿಷ್ಣುವರ್ಧನ್ ಮನೆಯಲ್ಲಿ ವಿಷ್ಣು ಅವರ ಖಾಸಾ ಮನೆಮಂದಿಯಂತೆಯೇ ಇಬ್ಬರು ಕೆಲಸಕ್ಕಿದ್ದರು. ಇವರಿಬ್ಬರ ಹೆಸರು ಶ್ರೀಧರ್ ಹಾಗೂ ರಾಧಾಕೃಷ್ಣ. ಇವರಿಬ್ಬರನ್ನೂ ವಿಷ್ಣುವರ್ಧನ್ ಎಂದಿಗೂ ಕೆಲಸದವರಂತೆ ಕಾಣದೆ, ತಮ್ಮ ಮನೆಮಂದಿಯಂತೆಯೇ ಕಾಣುತ್ತಿದ್ದರಂತೆ. ಅವರ ಊಟ, ಬಟ್ಟೆಬರೆ ಎಲ್ಲವನ್ನೂ ನೀಡುತ್ತಿದ್ದ ವಿಷ್ಣು ಸಾಯುವ ಮುನ್ನಾದಿನ ಇವರಿಬ್ಬರಿಗೂ ಕರೆ ಮಾಡಿ ಮಾತಾಡಿದ್ದರಂತೆ.

1980ರ ಸುಮಾರಿಗೆ 16 ವರ್ಷದ ತರುಣನಾದ ಶ್ರೀಧರ್ ವಿಷ್ಣುವರ್ಧನ್ ಮನೆಯಲ್ಲಿ ಕೆಲಸಕ್ಕೆ ಸೇರಿದರು. ಶ್ರೀಧರ್‌ ಸಣ್ಣ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು ಕುಟುಂಬದ ಎಲ್ಲ ಜವಾಬ್ದಾರಿಯೂ ಸಣ್ಣ ವಯಸ್ಸಿನಲ್ಲೇ ಹೆಗಲ ಮೇಲೆ ಬಿದ್ದಿತ್ತು. ಮೂಲತಃ ಸಾಗರದವರಾದ ಶ್ರೀಧರ್ ಅಂಥ ಸಂದರ್ಭದಲ್ಲಿ ಬೆಂಗಳೂರಿಗೆ ಬಂದರು. ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾಗ ವಿಷ್ಣುವರ್ಧನ್ ಅವರ ಮನೆಯಲ್ಲಿ ಕೆಲಸ ಖಾಲಿ ಇರುವುದು ಗೊತ್ತಾಯಿತು. ಹಾಗೆ ಕೆಲಸಕ್ಕೆ ಸೇರಿದ ಶ್ರೀಧರ್ ಇಂದಿಗೂ ವಿಷ್ಣುವರ್ಧನ್ ಮನೆಯಲ್ಲೇ ಕೆಲಸಕ್ಕಿದ್ದಾರೆ.

ಶ್ರೀಧರ್ ನೆನಪಿನಾಳದಿಂದ ವಿಷ್ಣುವರ್ಧನ್ ಬಗ್ಗೆ ಪುಂಖಾನುಪುಂಖ ಮಾಹಿತಿಗಳು ಹೊರಬೀಳುತ್ತವೆ. ಕಣ್ಣು ಹನಿಗೂಡುತ್ತವೆ. ವಿಷ್ಣು ಮನೆಗೆ ಕೆಲಸಕ್ಕೆ ಸೇರಿದಾಗ ಕೇವಲ ಧರಿಸಿದ ಚಡ್ಡಿ ಅಂಗಿ ಬಿಟ್ಟರೆ ಶ್ರೀಧರ್‌ಗೆ ಬೇರೆ ಬಟ್ಟೆಯೇ ಇರಲಿಲ್ಲವಂತೆ. ಕೆಲಸಕ್ಕೆ ಸೇರಿದ ಮೇಲೆ 50 ರೂಪಾಯಿ ಕೊಟ್ಟು ಒಂದು ಶರ್ಟ್ ಪೀಸ್ ಖರೀದಿಸಿದರಂತೆ. ಅದಕ್ಕೆ ವಿಷ್ಣು ಅವರಿಗೆ ತುಂಬ ಸಿಟ್ಟು ಬಂದು, ಇನ್ನು ಮುಂದೆ, ನೀನು ಏನೂ ಖರೀದಿಸಬೇಕಾಗಿಲ್ಲ. ಎಲ್ಲ ನಾನೇ ಕೊಡುತ್ತೇನೆ ಎಂದರಂತೆ. ಹಾಗೆ ವಿಷ್ಣು ಹೇಳಿದ ಮೇಲೆ ಇಂದಿನವರೆಗೂ ಊಟದಿಂದ ಹಿಡಿದು ಉಡುಗೆ ತೊಡುಗೆ ಎಲ್ಲವೂ ವಿಷ್ಣು ಅವರೇ ಖರೀದಿಸಿ ನೀಡುತ್ತಿದ್ದರಂತೆ.

ದುಬೈಗೆ ಕರೆದುಕೊಂಡೋದ್ರು: ರಾಧಾಕೃಷ್ಣ ಕೂಡಾ 15-16 ವರ್ಷದವನಿದ್ದಾಗಲೇ ವಿಷ್ಣುವರ್ಧನ್ ಮನೆಗೆ ಕೆಲಸಕ್ಕೆ ಸೇರಿದ್ದರು. ಭಾರತಿ ವಿಷ್ಣುವರ್ಧನ್ ಅವರ ಸಹೋದರನ ಮುಖಾಂತರ ವಿಷ್ಣು ಮನೆಯಲ್ಲಿ ರಧಾಕೃಷ್ಣರಿಗೆ ಕೆಲಸ ಸಿಕ್ತು. ರಾಧಾಕೃಷ್ಣ ಅವರೇ ಹೇಳುವಂತೆ. ಅವರಿಗೆ ದುಬೈಗೆ ಹೋಗಿ ಕೆಲಸ ಮಾಡಬೇಕೆಂಬುದು ಸಣ್ಣವನಿದ್ದಾಗಿನಿಂದಲೇ ಬಯಕೆಯಿತ್ತು. ಇದು ವಿಷ್ಣು ಅವರಿಗೂ ತಿಳಿದಿತ್ತು. ವಿಷ್ಣು ಅದಕ್ಕಾಗಿ ಒಮ್ಮೆ ತಾವು ಶೂಟಿಂಗಿಗೆ ದುಬೈಗೆ ಹೋದಾಗ ರಾಧಾಕೃಷ್ಣನನ್ನೂ ಕರೆದುಕೊಂಡು ಹೋಗಿದ್ದರಂತೆ. ಆತನ ಕನಸು ನನಸು ಮಾಡಿಸಲಿಕ್ಕಾಗಿ!

ಮದುವೆಯನ್ನೂ ಮಾಡಿಸಿದ್ರು: 1993ರಲ್ಲಿ ಶ್ರೀಧರ್ ಹಾಗೂ ಡ್ರೈವರ್ ರಾಧಾಕೃಷ್ಣ ಇಬ್ಬರಿಗೂ ಒಂದೇ ಛತ್ರದಲ್ಲಿ ವಿಷ್ಣು ಅವರೇ ನಿಂತು ಮದುವೆ ಮಾಡಿಸಿದರಂತೆ. ಇಬ್ಬರನ್ನೂ ವಿಷ್ಣುವರ್ಧನ್ ತಮ್ಮ ಮನೆಯ ಮಂದಿಯಂತೆಯೇ ನೋಡಿಕೊಳ್ಳುತ್ತಿದ್ದರಂತೆ. ಶ್ರೀಧರ್ ಪ್ರತಿದಿನ ಅಡುಗೆ, ಕ್ಲೀನಿಂಗ್ ಸೇರಿದಂತೆ ಮನೆ ಕೆಲಸ ಮಾಡುತ್ತಿದ್ದರೆ, ರಾಧಾಕೃಷ್ಣ ವಿಷ್ಣುವರ್ಧನ್‌ರನ್ನು ಶೂಟಿಂಗ್ ಸಮಯಕ್ಕೆ ಸರಿಯಾಗಿ ಕಾರಿನಲ್ಲಿ ಕರೆದುಕೊಂಡು ಹೋಗುವುದು ಕೆಲಸವಾಗಿತ್ತು. ಶೂಟಿಂಗ್ ಬೆಳಗ್ಗೆ ಇದ್ದರೆ ಬೆಳಗ್ಗೆ ಆರು ಗಂಟೆಗೆ ಮುಂಚಿತವಾಗಿ ರಾಧಾಕೃಷ್ಣ ರೆಡಿಯಾಗಿ ವಿಷ್ಣುವರ್ಧನ್ ಮನೆಗೆ ಬರಬೇಕಿತ್ತು.

ಕಾರನ್ನೇ ಗಿಫ್ಟ್ ಕೊಟ್ರು: ರಾಧಾಕೃಷ್ಣ ಅವರೆ ಅಂಬಾಸಿಡರ್ ಕಾರನ್ನೂ ವಿಷ್ಣು ಗಿಫ್ಟ್ ಆಗಿ ನೀಡಿದ್ದರಂತೆ. ಇದನ್ನು ಕಣ್ತುಂಬಿಕೊಂಡು ನೆನಪಿಸುತ್ತಾರೆ ರಾಧಾಕೃಷ್ಣ. ಶೂಟಿಂಗ್ ಸಂದರ್ಭದಲ್ಲೆಲ್ಲಾ, ವಿಷ್ಣು ಅವರ ಮೊಬೈಲ್ ಫೋನನ್ನು ಇಟ್ಟುಕೊಳ್ಳುವ ರಾಧಾಕೃಷ್ಣರೇ ವಿಷ್ಣುವಿಗೆ ಬರುವ ಎಲ್ಲ ಕರೆಗಳನ್ನೂ ಸ್ವೀಕರಿಸುತ್ತಿದ್ದರಂತೆ. ಸಾಯುವ ಮುನ್ನಾದಿನ ರಾಧಾಕೃಷ್ಣ ಹಾಗೂ ಶ್ರೀಧರ್ ಇಬ್ಬರಿಗೂ ಫೋನ್ ಮಾಡಿ ಮೈಸೂರಿನಿಂದ ಮಾತಾಡಿದ್ದರು. ರಾಧಾಕೃಷ್ಣ ಕಾರು ತೆಗೆದುಕೊಂಡು ಮೈಸೂರಿಗೆ ಬಾ. ನಿನ್ನೊಂದಿಗೆ ಬೆಂಗಳೂರಿಗೆ ಬೆಳಗ್ಗೆ ಬರುತ್ತೇನೆ ಎಂದಿದ್ದರಂತೆ. ರಾಧಾಕೃಷ್ಣ ಮೈಸೂರಿಗೆ ಕಾರು ತೆಗೆದುಕೊಂಡು ಹೋದರೆ, ವಿಷ್ಣುವರ್ಧನ್ ಆಗಲೇ ಇಹಲೋಕ ತ್ಯಜಿಸಿದ್ದರಂತೆ. ಹೀಗೆ ಹೇಳುವಾಗ ರಾಧಾಕೃಷ್ಣರ ಕಣ್ಣು ತುಂಬಿ ಬರುತ್ತದೆ. ನಾಳೆ ಬರುತ್ತೇನೆ ಮನೆಗೆ ಎಂದು ವಿಷ್ಣು ಶ್ರೀಧರ್ ಬಳಿಯೂ ಫೋನ್ ಮಾಡಿ ಮಾತಾಡಿದ್ದರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಶ್ರೀಧರ್, ರಾಧಾಕೃಷ್ಣ