ರೇಡಿಯೋ ನಿತ್ಯ ಕೇಳುಗರಿಗೊಂದು ಸುಹಿಸುದ್ದಿ. ರೇಡಿಯೋದಲ್ಲಿ ಉಪ್ಪಿ ಬರಲಿದ್ದಾರಂತೆ. ನಿರ್ದೇಶಕನಾಗಿ, ನಟನಾಗಿ ಮಿಂಚಿದ ಉಪೇಂದ್ರ ಇದೀಗ ಮಾತುಗಳ ಮೂಲಕ ಜನಮನ ಗೆಲ್ಲುವ ತಯಾರಿಯಲ್ಲಿದ್ದಾರೆ.
ವಿಷಯ ಏನೆಂದರೆ ಇದೇ ತಿಂಗಳ ಎರಡನೇ ವಾರದಿಂದ ಉಪ್ಪಿ ಖಾಸಗಿ ರೇಡಿಯೋ ವಾಹಿನಿಯೊಂದಕ್ಕೆ ಪ್ರತಿದಿನ ಮುಂಜಾನೆ ಕಾರ್ಯಕ್ರಮವೊಂದನ್ನು ನಡೆಸಿಕೊಡುವ ಮಾತು ನೀಡಿದ್ದಾರಂತೆ. ಈ ಕಾರ್ಯಕ್ರಮ ನಡೆಸಿಕೊಡುವ ಹಿಂದೆಯೂ ಉಪ್ಪಿಯ ಒಂದು ಗಿಮಿಕ್ ಇದೆ. ಅವರು ನಿರ್ದೇಶನ ಮಾಡಲು ಹೊರಟಿರುವ ತಮ್ಮ ಹೊಸ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರಂತೆ. ಅದರ ಜೊತೆಗೆ ಪ್ರೇಕ್ಷಕರ ಅಭಿರುಚಿ ಮನಗಾಣುವ ಸಲುವಾಗಿ ಉಪ್ಪಿ ರೇಡಿಯೋ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿಕೊಂಡಿದ್ದಾರಂತೆ.
ಮಳೆಯಲಿ ಜೊತೆಯಲಿ ಚಿತ್ರದ ಪ್ರಚಾರಕ್ಕಾಗಿ ಗಣೇಶ್, ಕಾಮಿಡಿ ಟೈಂ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಪ್ರತ್ಯಕ್ಷರಾಗಿದ್ದರು. ಇದೀಗ ರೇಡಿಯೋ ಮೂಲಕ ಉಪ್ಪಿಯ ಸರದಿ. ಅಂದಹಾಗೆ ಇದಕ್ಕೆ ಉಪೇಂದ್ರ ಪಡೆಯುತ್ತಿರುವ ಸಂಭಾವನೆ 2ಗಂಟೆಗೆ 2ಲಕ್ಷ ರೂ.ಗಳಂತೆ!