ದಿಗಂತ್ ಎದ್ದಿದ್ದಾರೆ. ಅದರರ್ಥ ಅವರೀವರೆಗೆ ಮಲಗಿರಲಿಲ್ಲ. ಬದಲಾಗಿ ನಿರ್ಮಾಪಕ ಕೆ.ಮಂಜು ಅವರನ್ನು ಎಬ್ಬಿಸಿದ್ದಾರೆ. ಎಬ್ಬಿಸಲು ಕಾರಣವೂ ಇದೆ. ಕೆ. ಮಂಜು ಅವರು ರಣಬೀರ್ ಕಪೂರ್ ನಟನೆಯ ಹಿಂದಿಯ ಹಿಟ್ ಚಿತ್ರ ವೇಕ್ ಅಪ್ ಸಿದ್ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಆ ಕಾರಣಕ್ಕಾಗಿ ದಿಗಂತನ್ನು ಎಬ್ಬಿಸಿದ್ದಾರೆ. ಹಾಗಾಗಿ ಮಲಗಿದ್ದ ದಿಗಂತ್ ಕಣ್ಣುಜ್ಜಿಕೊಂಡು ಸಿದ್ಧನಾಗಲು ಎದ್ದು ಕೂತಿದ್ದಾರೆ. ರಣಬೀರ್ ಕಪೂರ್ ನಾಯಕನಾಗಿದ್ದ ಪಾತ್ರವನ್ನು ದಿಗಂತ್ ಅವರ ಬಳಿ ಮಾಡಿಸಲು ನಿರ್ಮಾಪಕ ಕೆ. ಮಂಜು ದಿಗಂತ್‌ಗೆ ಕರೆ ಮಾಡಿದ್ದರು ಎನ್ನಲಾಗಿದೆ.
ದಿಗಂತ್ ಮುಂಬೈಯಲ್ಲಿದ್ದಾಗ ಮಂಜು ಕರೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ದಿಗಂತ್ ಕೆ. ಮಂಜು ಅವರು ನಾನು ಮುಂಬೈಯಲ್ಲಿದ್ದಾಗ ನನಗೆ ಕರೆ ಮಾಡಿದ್ದರು. ಮಂಜು ಅವರು ವೇಕ್ ಅಪ್ ಸಿದ್ ಚಿತ್ರದ ಹಕ್ಕುಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು, ನನ್ನ ಬಳಿ ಸಿದ್ ಪಾತ್ರಕ್ಕಾಗಿ ಫೋನ್ ಮಾಡಿದ್ದರು ನಾನು ಕ್ಷಣ ಮಾತ್ರದಲ್ಲಿ ಒಪ್ಪಿ ಬಿಟ್ಟೆ ಎನ್ನುತ್ತಾರೆ ದಿಗಂತ್.
ದಿಗಂತ್‌ಗೆ ನಿಜಕ್ಕೂ ಮಂಜು ಅವರ ಆಫರ್ ಕೇಳಿ ಕನ್‌ಫ್ಯೂಶನ್ ಆಗಲೇ ಇಲ್ಲವಂತೆ. ಕಾರಣ ವೇಕ್ ಅಪ್ ಸಿದ್‌ನ ಪಾತ್ರದಂತೆ ರಿಯಲ್ ಲೈಫಿನಲ್ಲೂ ದಿಗಂತ್ ಅದೇ ಗುಣ ಹೆಚ್ಚು ಕಡಿಮೆ ಇದೆಯಂತೆ. ಹಾಗೆ ನೋಡಿದರೆ ದಿಗಂತ್ ಹಾಗೂ ರಣಬೀರ್‌ಗೆ ಪರಿಚಯವಿರುವ ಒಬ್ಬರು ಹೇಳಿದಂತೆ ರಣಬೀರ್ ಕಪೂರ್ ಕೂಡಾ ನಿಜ ಜೀವನದಲ್ಲಿ ಕೊಂಚ ಸಿದ್‌ನ ಪಾತ್ರಕ್ಕೆ ಹೋಲುತ್ತಾರಂತೆ. ಹಾಗಾಗಿ ತನಗೆ ಸಿದ್ ಪಾತ್ರ ಮಾಡೋದು ಸುಲಭ ಅನ್ನೋದು ದಿಗಂತ್ ವಾದ.
ವೇಕ್ ಅಪ್ ಸಿದ್ ಕನ್ನಡಕ್ಕೆ ತಂದರೆ, ಅದಕ್ಕೆ ಕನ್ನಡದಲ್ಲಿ ಏನು ಹೆಸರಿರಬಹುದು ಎಂದರೆ, ದಿಗಂತ್ ತಕ್ಷಣ ಹೇಳೋದು ಸೋಮಾರಿ ಸಿದ್ಧ ಎಂಬ ಹೆಸರು ಹೆಚ್ಚು ಸೂಟ್ ಆಗುತ್ತೆ ಅಂತ.
ಒಟ್ಟಾರೆ ವೇಕ್ ಅಪ್ ಸಿದ್ ಕನ್ನಡಕ್ಕೆ ಬರೋದಂತೂ ಸತ್ಯ. ಕೊಂಕಣಾ ಸೇನ್ ಅಭಿನಯಿಸಿದ ಪಾತ್ರಕ್ಕೆ ಯಾರು ಅನ್ನೋದು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ದಿಗಂತ್ ಅಂತೂ ಸಿದ್ ಆಗೋದು ಸತ್ಯ.