ಕನ್ನಡ ಚಿತ್ರರಂಗ ಸಮಗ್ರ ನೀತಿ 2010: ಕ್ರೌರ್ಯ, ಅಶ್ಲೀಲಕ್ಕೆ ಕಡಿವಾಣ!
WD
ದಿಕ್ಕುಗೆಟ್ಟು ಸಾಗುತ್ತಿರುವ ಕನ್ನಡ ಚಲನಚಿತ್ರರಂಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದೆ ಬಂದಿದ್ದು, ಇನ್ನು ಮುಂದೆ ಕೇವಲ ಗುಣಾತ್ಮಕ, ಸದಭಿರುಚಿಯ, ಕೌರ್ಯ ಹಿಂಸೆ ಹಾಗೂ ಅಶ್ಲೀಲತೆಯಿಂದ ಹೊರತಾದ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ 'ಕನ್ನಡ ಚಲನಚಿತ್ರ ನೀತಿ- 2010' ರೂಪಿಸಲು ಸಜ್ಜಾಗಿದ್ದು, ಈಗಾಗಲೇ ಈ ಹಿನ್ನೆಲೆಯಲ್ಲಿ ಕರಡು ಸಿದ್ಧಗೊಳಿಸಿದೆ. ಸದ್ಯವೇ ಈ ನೀತಿ ಸಚಿವ ಸಂಪುಟದ ಚರ್ಚೆಗೆ ಬರಲಿದೆ.
20 ಪುಟಗಳ ಸಮಗ್ರ ನೀತಿಯಾಗಿರುವ ಈ ಕರಡನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಗೊಳಿಸಿದ್ದು, ಸಂಪುಟದ ಅನುಮೋದನೆಯ ನಂತರ ಮುಂದಿನ ಮೂರು ವರ್ಷಗಳವರೆಗೆ ಈ ನೀತಿ ಜಾರಿಯಲ್ಲಿರಲಿದೆ.
ಕನ್ನಡ ಮತ್ತು ಕರ್ನಾಟಕದ ಇತರ ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಸಂಬಂಧಿಸಿದಂತೆ ಈವರೆಗಿದ್ದ ಮನರಂಜನಾ ತೆರಿಗೆ ವಿನಾಯಿತಿ, ಸಹಾಯಧನ, ಪ್ರಶಸ್ತಿ ಪುರಸ್ಕಾರ ಸೇರಿದಂತೆ, ಕನ್ನಡ ಚಲನಚಿತ್ರರಂಗದ ಸಮಗ್ರ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಈ ನೀತಿಯಲ್ಲಿ ಸೇರಿಸಲಾಗಿದೆ.
ಮನರಂಜನಾ ತೆರಿಗೆ- ಈ ಹೊಸ ಚಲನಚಿತ್ರ ನೀತಿಯ ಪ್ರಕಾರ, ರಾಜ್ಯದಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗಿರುವ ಕನ್ನಡ ಹಾಗೂ ಪ್ರಾದೇಶಿಕ ಚಿತ್ರಗಳು, ವಾರ್ತಾ ಇಲಾಖೆ ಅನುಮತಿ ಪಡೆದು ಹೊರರಾಜ್ಯದ ಹೊರಾಂಗಣದಲ್ಲಿ ಚಿತ್ರವೊಂದರ ಶೇ.50ಕ್ಕಿಂತ ಕಡಿಮೆ ಚಿತ್ರೀಕರಣವಾದ ಚಿತ್ರಗಳಿಗೆ ಕೆಲವು ಶರತ್ತುಗಳೊಂದಿಗೆ ಶೇ.100 ಮನರಂಜನಾ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡುವ ರಿಮೇಕ್ ಚಿತ್ರಗಳೂ ತೆರಿಗೆ ವಿನಾಯ್ತಿ ಪಡೆಯಲು ಅರ್ಹ ಎಂಬುದನ್ನೂ ಇದರಲ್ಲಿ ಸೇರಿಸಲಾಗಿದೆ.
ಸಹಾಯಧನ- ರಾಜ್ಯದಲ್ಲೇ ನಿರ್ಮಾಣವಾಗುವ ಚಿತ್ರಗಳ ಪೈಕಿ 50 ಚಿತ್ರಗಳಿಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಈ 50 ಚಿತ್ರಗಳ ಪೈಕಿ ಸಹಾಯಧನ ಸಮಿತಿಯ ವಿಶೇಷ ಮನ್ನಣೆ ಪಡೆಯುವ ಚಿತ್ರಗಳಿಗೆ ತಲಾ 15 ಲಕ್ಷ ರೂಪಾಯಿಗಳೂ, ಉಳಿದವುಗಳಿಗೆ ತಲಾ 10ಲಕ್ಷ ರೂಪಾಯಿಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ಸರ್ಕಾರ ರಚಿಸುವ ಗುಣಾತ್ಮಕ ಕನ್ನಡ ಚಿತ್ರಗಳ ಆಯ್ಕೆ ಸಮಿತಿಗೂ ಕೆಲವು ಮಾರ್ಗದರ್ಶನಗಳ್ನು ಸೂಚಿಸಲಾಗಿದೆ. ಈ ಸೂಚನೆಗಳ ಆದಾರದಲ್ಲಿ ಮಕ್ಕಳ ಚಿತ್ರಗಳು, ಗುಣಾತ್ಮಕ ಕನ್ನಡ ಚಿತ್ರಗಳು, ಐತಿಹಾಸಿಕ ಪರಂಪರೆ ಕುರಿತ ಚಿತ್ರಗಳನ್ನು ಮಾತ್ರ ಸಮಿತಿ ಆಯ್ಕೆ ಮಾಡಬಹುದು. ಸರ್ಕಾರದ ಪ್ರತಿ ಚಲನಚಿತ್ರ ಪ್ರಶಸ್ತಿಗೂ ಈ ಮಾನದಂಡ ಅನುಸರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವ ಕಥಾವಸ್ತುಗಳ ನಾಲ್ಕು ಚಿತ್ರಗಳಿಗೆ ಪ್ರೋತ್ಸಾಹ ಧನ, ಕಾದಂಬರಿ ಆಧಾರಿತ ಚಿತ್ರಕ್ಕೆ ಧನಸಹಾಯವೂ ಇದರಲ್ಲಿ ಸೇರಿದೆ.
ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿ, ಚಿತ್ರ ನಿರ್ಮಾಪಕ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಇಡೀ ಚಿತ್ರೋದ್ಯಮದ ಪ್ರಮುಖರೊಂದಿಗೆ ಚರ್ಚಿಸಿ ಬಂದ ಸಲಹೆಗಳ ಆಧಾರದಲ್ಲಿ ಈ ನೀತಿ ರೂಪಿಸಲಾಗಿದೆ.
ಈಗ್ಗೆ ಮೂರು ವರ್ಷಗಳ ಹಿಂದೆ ಕೋಟಿಚೆನ್ನಯ ಎಂಬ ತುಳು ಚಿತ್ರದ ನಟನೆಗಾಗಿ ಟಿ ನೀತು ಅವರಿಗೆ ಪೋಷಕ ನಟಿ ವಿಭಾಗದಲ್ಲಿ ಪ್ರಶಸ್ತಿ ದೊರಕಿತ್ತು. ಇದನ್ನು ಪ್ರಶ್ನಿಸಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು, ಕನ್ನಡ ಚಲನಚಿತ್ರ ಸಮಗ್ರ ನೀತಿ ರಚಿಸಲು ಕೋರಿ ಕೋರ್ಟು ಮೆಟ್ಟಿಲೇರಿದ್ದರು. ಈ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ಸಮಗ್ರ ನೀತಿ ರೂಪಿಸಲು ಆದೇಶ ನೀಡಿತ್ತು. ಈ ಹಿನ್ನೆಲೆಯೂ ಕೂಡಾ ಇಂಥದ್ದೊಂದು ಸಮಗ್ರ ನೀತಿ ಹೊರಬರಲು ಕಾರಣ ಎನ್ನಲಾಗುತ್ತಿದೆ.