ಎರಡು ವರ್ಷಗಳ ನಂತರ ಮಿನುಗು ಚಿತ್ರದಲ್ಲಿ ನಟಿಸಿದ ನಟ ಸುನೀಲ್ ರಾವ್ ತಮ್ಮ ಹಿಂದಿನ ಚಿತ್ರಗಳ ಬಗೆಗೆ ಮುಕ್ತವಾಗಿ ಮಾತನಾಡಿದ್ದಾರೆ. ದಯಾಳ್ ನಿರ್ದೇಶನದ ಮಸಾಲ ಚಿತ್ರ ತಾನಂದುಕೊಂಡಂತೆ ಬರಲಿಲ್ಲ. ಅಲ್ಲದೆ ತಾನು ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ನಟ ಸುನೀಲ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಮಸಾಲದಲ್ಲಿ ನಟಿಸಿದ್ದು ತನ್ನ ಅಭಿಮಾನಿಗಳಿಗೇ ಇಷ್ಟವಾಗಲಿಲ್ಲ ಎನ್ನುತ್ತಾರೆ ಅವರು.
ಬಾ ಬಾರೋ ರಸಿಕ ಮತ್ತು ಸಖಸಖಿ ಚಿತ್ರಗಳು ಸುನೀಲ್ ಅವರಿಗೆ ಸಿಕ್ಕಾಪಟ್ಟೆ ಖುಷಿ ತಂದುಕೊಟ್ಟಿದ್ದವಂತೆ. ಅಲ್ಲದೆ ಬಾ ಬಾರೋ ರಸಿಕ ಚಿತ್ರ ವಿವಾದ ಹುಟ್ಟು ಹಾಕುತ್ತದೆ ಎಂದುಕೊಂಡಿದ್ದರಂತೆ ಅವರು. ಅದೇಕೋ ಆ ಚಿತ್ರ ಸದ್ದೇ ಮಾಡಲಿಲ್ಲ ಎಂದು ಸುನೀಲ್ ಬೇಸರ ಮಾಡಿಕೊಳ್ಳುತ್ತಾರೆ.
ಹೆಚ್ಚು ಅಭಿಮಾನಿಗಳ ಮನಸ್ಸು ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೂ ಹಲವಾರು ಕಾರಣಗಳಿವೆ. ಅವನ್ನೆಲ್ಲ ದಯಮಾಡಿ ಕೇಳಬೇಡಿ ಎನ್ನುತ್ತಾರೆ ಅವರು. ಸದ್ಯಕ್ಕೆ ತಾನು ಉತ್ತಮ ಅವಕಾಶಗಳಿಗಾಗಿ ಕಾಯುತ್ತಿರುವುದು ಸುಳ್ಳಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ ಸುನೀಲ್ ರಾವ್.