ಒಂಟಿ ಮನೆಯೊಂದರಲ್ಲಿ ಭಯ ಹಾಗೂ ಛಲವನ್ನು ಮನದಲ್ಲಿ ತುಂಬಿಕೊಂಡು ಓಡಾಡುವ ಹುಡುಗನೊಬ್ಬನ ಸೊಗಸಾದ ನಟನೆಯನ್ನು ಶಿಶಿರ ಚಿತ್ರ ನೋಡಿದವರು ಗಮನಿಸಿರುತ್ತಾರೆ. ಹೌದು. ಶಿಶಿರ ಚಿತ್ರದಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ನಟ ಯಶಸ್ ಚಿತ್ರರಸಿಕರ ಗಮನ ಸೆಳೆದಿದ್ದಾರೆ. ಅಲ್ಲದೆ ಗಾಂಧಿನಗರದ ಕೆಲವು ನಿರ್ದೇಶಕ ಹಾಗೂ ನಿರ್ಮಾಪಕರ ಕಣ್ಣಿಗೂ ಬಿದ್ದಿದ್ದಾರೆ.
ಈವರೆಗೆ ಚೆಂದದ ಹುಡುಗ, ಆಧ್ರೆ ನಟನೆ ಅಷ್ಟಕ್ಕಷ್ಟೆ ಅಂತ ಮೂಲೆಗುಂಪಾಗಿದ್ದ ಯಶಸ್ ಈಗ ಶಿಶಿರದ ಮೂಲಕ ಎಲ್ಲರ ಹುಬ್ಬೇರಿಸಿರುವುದು ಸುಳ್ಳಲ್ಲ. ಇದೀಗ ಯಶಸ್ ತಾವು ಮುಂದೆ ಯಾವ ಚಿತ್ರದಲ್ಲಿ ನಟಿಸಿದರೂ ಅದಕ್ಕೆ ಬೇಕಾದ ಎಲ್ಲಾ ಪೂರ್ವತಯಾರಿಗಳನ್ನು ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. ಪ್ರತಿಯೊಬ್ಬ ಕಲಾವಿದನ ಒಂದೊಂದು ನಟನಾ ಶೈಲಿಯನ್ನು ತಮ್ಮ ಚಿತ್ರ ಜೀವನದಲ್ಲಿ ಅಳವಡಿಸಿಕೊಳ್ಳಲು ಬಯಸಿದ್ದಾರಂತೆ ಅವರು. ದೊಡ್ಡ ಬ್ಯಾನರ್ ಚಿತ್ರಕ್ಕಿಂತ ತೂಕ ಇರುವ ಕಥೆಯ ಚಿತ್ರದಲ್ಲಿ ನಟಿಸಬೇಕೆಂದು ಯಶಸ್ ತೀರ್ಮಾನಿಸಿದ್ದಾರಂತೆ.
ಇಷ್ಟೆಲ್ಲ ತತ್ವಗಳನ್ನು ನಿಜವಾಗಿಯೂ ಪಾಲಿಸಿದಲ್ಲಿ ಅವರಿಗೆ ಗೆಲುವು ಸಿಗೋದೇನೂ ಕಷ್ಟವಿಲ್ಲ ಬಿಡಿ. ಸದಾ ಕಾಲ ಯಶಸ್ಗೆ ಯಶಸ್ಸು ಸಿಗಲೆಂದು ಹಾರೈಸೋಣ.