ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಸಾವನ್ನು ಎನ್‌ಕ್ಯಾಶ್ ಮಾಡಬೇಡಿ: ಸುದೀಪ್ ಕಿಡಿಕಿಡಿ! (Vishnuvardhan | Aptharakshaka | School Master | Porki)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ವಿಷ್ಣುವರ್ಧನ್ ಅಭಿನಯದ ಕೊನೆಯ ಎರಡು ಚಿತ್ರಗಳಾದ ಆಪ್ತರಕ್ಷಕ ಹಾಗೂ ಸ್ಕೂಲ್ ಮಾಸ್ಟರ್ ಚಿತ್ರಗಳೆರಡೂ ಬಿಡುಗಡೆಗೆ ಸಿದ್ಧವಾಗಿದೆ. ವಿಷ್ಣು ಸಾವಿನ ನಂತರ ಈ ಎರಡು ಚಿತ್ರಗಳೀಗ ಕೆಲವೇ ದಿನಗಳ ಅಂತರದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದು ಚಿತ್ರರಂಗದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ವಿಷ್ಣುವರ್ಧನ್ ಅವರ ಚಿತ್ರ ಬಿಡುಗಡೆಯಾಗುತ್ತಿರುವ ಕಾರಣದಿಂದ ಅವರಿಗೆ ಗೌರವ ಸಲ್ಲಿಸುವ ಕಾರಣದಿಂದ ಸುದೀಪ್ ತಮ್ಮ ಜಸ್ಟ್ ಮಾತ್ ಮಾತಲಿ ಚಿತ್ರವನ್ನು ಮುಂದೂಡಿದ್ದಾರೆ. ದರ್ಶನ್ ಅವರ ಪೊರ್ಕಿಯೂ ಮುಂದೂಡಲ್ಪಟ್ಟಿದೆ. ಹಾಗಾಗಿ ಜ.22ರಂದು ವಿಷ್ಣುವರ್ಧನ್ ಹಾಗೂ ಸುಹಾಸಿನಿ ಜೋಡಿಯ ಸ್ಕೂಲ್ ಮಾಸ್ಟರ್ ಚಿತ್ರ ಬಿಡುಗಡೆ ಕಾಣಲಿದೆ. ಬಹುನಿರೀಕ್ಷಿತ ಆಪ್ತರಕ್ಷಕ ಫೆ.5ರಂದು ತೆರೆಗೆ ಬರಲಿದೆ.

ದಯವಿಟ್ಟು ಎನ್‌ಕ್ಯಾಶ್ ಮಾಡಬೇಡಿ!: ಸ್ಕೂಲ್ ಮಾಸ್ಟರ್ ಚಿತ್ರದ ಕ್ಯಾಸೆಟ್ ಬಿಡುಗಡೆ ಸಂದರ್ಭ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ವಿಷ್ಣು ಅವರ ಅಂತಿಮ ಎರಡು ಚಿತ್ರಗಳಿಗೆ ಗೌರವ ಸಲ್ಲಿಸಲು ಹಾಗೂ ಅವರ ಅಭಿಮಾನಿಗಳೆಲ್ಲರೂ ಚಿತ್ರವನ್ನು ನೋಡಲು ಅವಕಾಶ ಮಾಡಿಕೊಡುವ ಸಲುವಾಗಿ ಆ ದಿನ ಬೇರೆ ಚಿತ್ರಗಳು ಬಿಡುಗಡೆಯಾಗದಿದ್ದರೆ ಒಳ್ಳೆಯದಿತ್ತು ಎಂದು ಮಾತನಾಡಿದ್ದರು ಎನ್ನಲಾಗಿದೆ. ಅವರು ಹೀಗೆ ಹೇಳಿದ್ದರೆನ್ನಲಾದ ಬೆನ್ನಲ್ಲೇ ಸುದೀಪ್ ತನ್ನ ಜಸ್ಟ್ ಅಭಿನಯ ಹಾಗೂ ನಿರ್ದೇಶನದ ಜಸ್ಟ್ ಮಾತ್ ಮಾತಲಿ ಚಿತ್ರವನ್ನು ಅನಿರ್ಧಿಷ್ಟಾವಧಿ ಕಾಲಕ್ಕೆ ಮುಂದೂಡಿದ್ದಾರೆ. ದರ್ಶನ್ ಅಭಿನಯದ ಪೊರ್ಕಿಯೂ ಮುಂದೂಡಲ್ಪಟ್ಟಿದೆ.

ಆದರೆ ಸುದೀಪ್, ವಿಷ್ಣು ಅವರಿಗೆ ಗೌರವ ನೀಡುವ ಜೊತೆಗೆ, ಪ್ರೀತಿಯಿಂದ ಅವರ ಚಿತ್ರ ಬಿಡುಗಡೆಗೆ ನಾವೆಲ್ಲ ಅವಕಾಶ ಮಾಡಿಕೊಡುತ್ತೇವೆ. ಆದರೆ ನಿರ್ಮಾಪಕರು ಪೈಪೋಟಿಯಿಂದ ವಿಷ್ಣು ಅವರ ಚಿತ್ರಗಳನ್ನು ಏಕಾಏಕಿ ಬಿಡುಗಡೆ ಮಾಡಿ ಅವರ ಸಾವಿನ ವಿಚಾರವನ್ನು ತಮ್ಮ ಚಿತ್ರದ ಮೂಲಕ ಎನ್‌ಕ್ಯಾಶ್ ಮಾಡಿಕೊಳ್ಳಬಾರದು ಎಂದು ನಿರ್ಮಾಪಕರಲ್ಲಿ ವಿನಂತಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸುದೀಪ್, ''ವಿಷ್ಣುವರ್ಧನ್ ಮೇಲೆ ನಮಗೆ ಅಪಾರ ಗೌರವವಿದೆ. ಅವರು ಬದುಕಿರುವಾಗಲೇ ಸಿನಿಮಾ ಥರ ಬದುಕಿದರು. ನಾವೆಲ್ಲಾ ಅವರ ಮುಂದೆ ಕೇವಲ ಮಕ್ಕಳು. ಅವರೆಲ್ಲಿ ನಾವೆಲ್ಲಿ? ನಾಡಿದ್ದು ಬಿಡುಗಡೆ ಕಾಣುತ್ತಿರುವುದು ವಿಷ್ಣು ಅಭಿನಯದ ಕೊನೆಯ ಎರಡು ಚಿತ್ರಗಳು. ಅವರ ಚಿತ್ರಗಳಿಗೆ ಸುದೀಪ್‌ರಂಥವರ ಚಿತ್ರಗಳು ಪೈಪೋಟಿಯೇ ಅಲ್ಲ. ಆದರೆ ನಿರ್ಮಾಪಕರು ವಿಷ್ಣು ಅವರಿಗೆ ಗೌರವ ನೀಡುತ್ತಲೇ ಪ್ರೀತಿ ಮಾಡೋದನ್ನೂ ಕಲೀಬೇಕು. ನನಗೆ ವೈಯಕ್ತಿಕವಾಗಿ ವಿಷ್ಣು ಸರ್ ಮೇಲೆ ಅಪಾರ ಗೌರವವಿದೆ. ಅವರಿಗೆ ಗೌರವ ಕೊಡೋದನ್ನು ಯಾರೂ ನಮಗೆ ಹೇಳಿಕೊಡಬೇಕಿಲ್ಲ. ಆದರೆ ಅವರ ಹೆಸರಿನಲ್ಲಿ ದಯವಿಟ್ಟು ಕಿತ್ತಾಟ ಬೇಡ. ಅವರ ಸಾವನ್ನು ನಿಮ್ಮ ಚಿತ್ರಗಳ ಮೂಲಕ ಎನ್‌ಕ್ಯಾಶ್ ಮಾಡಿಕೊಳ್ಳುವ ಕೆಲಸವನ್ನು ನಿರ್ಮಾಪಕರು ದಯವಿಟ್ಟು ಮಾಡಬೇಡಿ'' ಎಂದು ಕಿಡಿ ಕಾರಿದರು.

''ನನ್ನ ಚಿತ್ರ ಮುಂದೂಡುವ ವಿಚಾರದಲ್ಲಿ ನನಗ್ಯಾವ ಅಭ್ಯಂತರವೂ ಇಲ್ಲ. ಒಂದು ವಾರ ಬೇಕೋ, ಎರಡು ವಾರನೋ, ನಾಲ್ಕು ವಾರನೋ... ಎಷ್ಟು ಕಾಲ ಬೇಕೋ ಅಷ್ಟು ಕಾಲ ಮುಂದೂಡಲು ನಾನು ಸಿದ್ಧ. ಆದರೆ ವಿಷ್ಣು ಸರ್ ಚಿತ್ರವನ್ನು ದಯವಿಟ್ಟು ಪ್ರೀತಿಸಿ. ಇವೆರಡೂ ಅವರ ಅಂತಿಮ ಚಿತ್ರಗಳು. ಇನ್ನೆಂದೂ ಅವರ ಚಿತ್ರಗಳು ಬಿಡುಗಡೆಯಾಗೋದಿಲ್ಲ. ಹಾಗಾಗಿ ನಿರ್ಮಾಪಕರು ಅವರನ್ನು ಪ್ರೀತಿ ಮಾಡಿ, ಅವರಿಗೆ ಗೌರವ ಕೊಟ್ಟು, ಉತ್ತಮವಾಗಿ ಪ್ರಚಾರ ಮಾಡಿ ಬಿಡುಗಡೆ ಮಾಡಿ'' ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಆಪ್ತರಕ್ಷಕ, ಸ್ಕೂಲ್ ಮಾಸ್ಟರ್, ಜಸ್ಟ್ ಮಾತ್ ಮಾತಲಿ, ಪೊರ್ಕಿ