ನಟ ವಿಷ್ಣುವರ್ಧನ್ ಸಾವಿನ ನಂತರ ಮತ್ತೊಂದು ಆಘಾತ ಕನ್ನಡ ಚಿತ್ರರಂಗಕ್ಕೆ ಬಡಿದಿದೆ. ಹಿರಿಯ ಪೋಷಕ ನಟ ಕೆ.ಎಸ್.ಅಶ್ವತ್ಥ್ ಮರಳಿ ಬರಲಾಗದ ಲೋಕಕ್ಕೆ ತೆರಳಿದ್ದಾರೆ. ಕುಟುಂಬ ಸದಸ್ಯರಲ್ಲಿ ದುಃಖ ಮಡುಗಟ್ಟಿದ್ದು, ಚಿತ್ರರಂಗವೂ ಅಶ್ವತ್ಥ್ ಸಾವಿಗೆ ಕಂಬನಿ ಮಿಡಿದಿದೆ. ಸಾಗರೋಪಾದಿಯಲ್ಲಿ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಅಶ್ವತ್ಥ್ ಅವರ ಅಂತಿಮ ದರ್ಶನಕ್ಕೆ ಮೈಸೂರಿಗೆ ಧಾವಿಸುತ್ತಿದ್ದಾರೆ.
ಗಣ್ಯರ ಕಂಬನಿ:
ನಿರ್ದೇಶಕ ಎಸ್.ನಾರಾಯಣ್- ಅದೊಂದು ದಿನ ನನ್ನ ಜೊತೆ ಕೆಲಸ ಮಾಡಲು ಒಂದು ದಿನದ ಮಟ್ಟಿಗೆ ಬಂದ್ರು. ಆಗಷ್ಟೆ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದರು. ಆಗವರು ತುಂಬ ನೊಂದಿದ್ದರು. ಆಗ ಅಶ್ವತ್ಥ್ ಅವರು ನನ್ನ ಬಳಿ, ನನ್ನ ಕಣ್ಣಾರೆ ರಾಜ್ ಸಾವನ್ನು ನೋಡುವಂತಾಯ್ತಲ್ಲ ಎಂದಿದ್ದರು. ರಾಜ್ ಸಾವು ಅವರನ್ನು ತುಂಬ ಜರ್ಝರಿತರನ್ನಾಗಿಸಿತ್ತು. ಅಶ್ವತ್ಥ್ ಅವರಿಗೆ ಪಾತ್ರ ಚೆನ್ನಾಗಿ ಬರಬೇಕೆಂಬುದು ಅವರಿಗೆ ಇತ್ತು. ಅದಕ್ಕಾಗಿ ಶೂಟಿಂಗ್ ಸಂದರ್ಭ ಹಾಗೆ ಮಾಡ್ಲಾ, ಹೀಗೆ ಮಾಡ್ಲಾ ಎಂದು ಬೇರೆ ಬೇರೆಯಾಗಿ ಅಭಿನಯಿಸಿ ತೋರಿಸಿತಿದ್ದರು. ಇದು ಕೆಲವರಿಗೆ ಸಿಟ್ಟು ತರಿಸುತ್ತಿತ್ತು. ಹಾಗಾಗಿ ಅವರಿಗೆ ಹೊಸ ಜನರೇಶನ್ ಜೊತೆ ಕೆಲಸ ಮಾಡಲು ಆಗಲಿಲ್ಲ. ಚಿತ್ರರಂಗಕ್ಕೆ ವಿದಾಯ ಹೇಳಿದ್ರು. ಐದು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿದ ಹೆಮ್ಮೆ ನನಗಿದೆ. ಅವರು ಶಿಸ್ತಿನ ಮನುಷ್ಯ. ಕನ್ನಡ ಚಿತ್ರರಂಗದಲ್ಲಿ ಅಶ್ವತ್ಥ್ ಸ್ಥಾನ ಸದಾ ಇರುತ್ತದೆ. ಆ ಸ್ಥಾನಕ್ಕೆ ಯಾರು ಬರಲೂ ಸಾಧ್ಯವಿಲ್ಲ. ಅವರ ಸಾವಿನಿಂದ ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ.
ಹಿರಿಯ ನಟ ಶಿವರಾಂ- 'ಅಶ್ವತ್ಥ್ ಅವರು ನನಗೆ ಅಣ್ಣನ ಥರ. ಅವರ ಶಿಸ್ತು, ಸಂಯಮ ಆದರ್ಶ ಪ್ರಾಯ. ಅವರು ಮಹಾನ್ ಸ್ವಾಭಿಮಾನಿ, ತನ್ನ ಕೆಲಸ ತಾನೇ ಮಾಡಿಕೊಳ್ಳಬೇಕೆಂಬ ಹಠ ಅವರಲ್ಲಿತ್ತು. ತನ್ನ ಕೆಲಸಕ್ಕಾಗಿ ಯಾರ ಸಹಾಯ ಪಡೆಯುತ್ತಿರಲಿಲ್ಲ. ಅಂದು ಒಂದು ದಿನ ಅಸ್ವಸ್ಥರಾದ ಸಂದರ್ಭ ನನ್ ಬಳಿ, ಒಂದೆರಡುವರೆ ಸಾವಿರ ರೂಪಾಯಿ ಹೊಂದಿಸಲು ಸಾಧ್ಯವಾಗ್ತಾ ಇಲ್ಲ ಏನು ಮಾಡಲಿ ಎಂದಿದ್ದರು. ಆಗ ಟಿವಿ ವಾಹಿನಿಗಳಿಗೆ ಎರಡು ಸಂದರ್ಶನ ನೀಡಿದ್ದರು. ಒಂದು ಮಲಗಿಕೊಂಡೇ ನೀಡಿದ್ದರು. ಅದರಿಂದ ಅದು ಸಾಕಷ್ಟು ಪ್ರಚಾರವಾಗಿ ಅಭಿಮಾನಿಗಳೇ ಅವರಿಗೆ ಸಾಕಷ್ಟು ಸಂಗ್ರಹಿಸಿ ದುಡ್ಡು ನೀಡಿದ್ದರು. ಆದರೆ ಅವರು ದುಡ್ಡನ್ನು ಯಾರಿಂದಲೂ ಬಯಸಿದವರಲ್ಲ.'
'ಅಶ್ವತ್ಥ್ ಅವರ ಆದರ್ಶಗಳು, ಅವರು ಹೇಗೆ ಬದುಕಿದ್ದರು ಎನ್ನೋದೇ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಿಧಿ. ಅವರು ಯಾವಾಗಲೂ, ಕನ್ನಡ ಉದ್ಯಮವನ್ನು ಬಿಡಬಾರದು. ನಮ್ಮ ಚಿತ್ರರಂಗವನ್ನು ಎತ್ತಿ ಹಿಡಿಯಬೇಕು ಎಂದು ಹೇಳುತ್ತಿದ್ದರು. ಆದರೆ, ಸರ್ಕಾರ ಅವರಿಗೆ ಏನೂ ಮಾಡಿಲ್ಲ. ಸರ್ಕಾರ ಅವರಿಗೆ ಸಹಾಯ ನೀಡಿದ್ದರೆ, ಏನು ಕಳೆದುಕೊಳ್ತಿತ್ತು ಹೇಳಿ? ಆದರೆ ಅಶ್ವತ್ಥ್ ಅವರು ಏನನ್ನೂ ಬಯಸಿರಲಿಲ್ಲ. ಅವರಿಗೆ ಸಿಗಬೇಕಾದ ಪ್ರಶಸ್ತಿಗಳೂ ಅವರಿಗೆ ಸಿಗಲಿಲ್ಲ. ಕೆಲವು ಪ್ರಶಸ್ತಿಗಳನ್ನು ಸರ್ಕಾರ ನೀಡಿರುತ್ತಿದ್ದರೆ, ಪ್ರಶಸ್ತಿಗಳಿಗಾದರೂ ಘನತೆ ಬರ್ತಿತ್ತು. ಅದಕ್ಕೇ ನಾನು ಅವರನ್ನು ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳ ಸಾರ್ವಭೌಮ ಎಂದಿದ್ದು' ಎಂದರು ನಟ ಶಿವರಾಂ.
ನಟ ರಮೇಶ್ ಅರವಿಂದ್- ಅವರ ಜೊತೆ 2-3 ಸಿನಿಮಾ ಮಾಡ್ದೆ. ಸುಂದರ ಸ್ವಪ್ನಗಳು ಚಿತ್ರದಲ್ಲಿ ಅವರ ಜೊತೆ ಮೊದಲು ನಟಿಸಿದ್ದು. ಎಷ್ಟೊಂದು ಸಿನ್ಸಿಯರ್ ಆಗಿ ಸಿನಿಮಾ ಮಾಡ್ತಿದ್ರು. 150 ಚಿತ್ರಗಳಲ್ಲಿ ಅಭಿನಯಿಸಿದ್ರೂ ನಾನು ಹೊಸಬ ಅನ್ನೋ ರೀತಿಯಲ್ಲಿ ಪ್ರತಿ ಚಿತ್ರದಲ್ಲೂ ನಟಿಸ್ತಿದ್ರು. ಅವರಿಗೆ ಅನಾರೋಗ್ಯವಾಗಿದ್ದಾಗ ನಾನು ಅಮೆರಿಕದಲ್ಲಿದ್ದೆ. ಆಗ ಅಲ್ಲಿಯ ಮಂದಿಯೂ ನನ್ನಲ್ಲಿ ಅಶ್ವತ್ಥ್ ಅವರು ಹೇಗಿದ್ದಾರೆ ಅಂತ ಕೇಳ್ತಿದ್ರು. ಇದು ಅವರ ಖ್ಯಾತಿಗೆ, ಪ್ರೀತಿಗೆ ನಿದರ್ಶನ. ಅಶ್ವತ್ಥ್ ಅವರು, ಹೊಸ ಹುಡುಗರಿಗೆ ಸಿನಿಮಾ ಬಗ್ಗೆ ಗೌರವನೇ ಇಲ್ಲ ಅಂತಿದ್ರು. ಅವರು ತುಂಬ ಶಿಸ್ತಿನ ಮನುಷ್ಯ. ಅವರಿಲ್ಲದ ಸಿನಿಮಾ ಪೂರ್ಣಗೊಳ್ತಿರಲೇ ಇಲ್ಲ. ನಾವು ಆಕ್ಟಿಂಗ್ ಕಲೀಬೇಕು ಅಂದ್ರೆ ಯಾವ ವಿಶ್ವವಿದ್ಯಾನಿಲಯಕ್ಕೂ ಹೋಗಬೇಕಿಲ್ಲ. ಅಶ್ವತ್ಥ್ ಅವರನ್ನು ನೋಡಿ ಕಲಿತ್ರೆ ಸಾಕು.
ಪುನೀತ್ ರಾಜ್‌ಕುಮಾರ್: ಚಿಕ್ಕವಯಸ್ಸಿನಲ್ಲಿ ನಾನು ಬಾಲನಟನಾಗಿ ಅಭಿನಯಿಸುತ್ತಿದ್ದಾಗ ಅವರ ಜೊತೆ ಅಭಿನಯಿಸಿದ ಅನುಭವ ಇದೆ. ಅಶ್ವತ್ಥ್ ಅವರಿಗೆ
ತಂದೆಯವರಿಗೆ ಬಹಳ ಅಭಿಮಾನವಿತ್ತು. ದೇವರು ಅಶ್ವತ್ಥ್ ಅವರ ಮನೆಮಂದಿಗೆ ಕಷ್ಟವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ರಾಘವೇಂದ್ರ ರಾಜ್‌ಕುಮಾರ್- ಅಪ್ಪಾಜಿ, ಅಶ್ವತ್ಥ್ ಅವರೆಲ್ಲ ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಈಗ ಅವರೆಲ್ಲರೂ ಇಲ್ಲ ಎಂದಾಗ ತುಂಬ ಬೇಜಾರಾಗುತ್ತೆ. ಅಶ್ವತ್ಥ್ ಅವರು ಸಿಕ್ಕಾಗ ಹೇಳ್ತಾ ಇದ್ದರು, ನಿಮ್ಮ ಅಪ್ಪಾಜಿ ಹೋಗೋ ಮೊದಲು ನಾನೇ ಹೋಗಬೇಕಿತ್ತು ಎಂದು. ಅದಕ್ಕೂ ಮೊದಲು ಹಿಂದೊಮ್ಮೆ ಅವರು ನಮ್ಮ ನಿರ್ಮಾಣದ ಸಿನಿಮಾದಲ್ಲಿ ನಟಿಸಿದ್ದರು. ಆಗ ಅಂದುಕೊಂಡಿದ್ದಕ್ಕಿಂತ ಹೆಚ್ಚು ದಿನಗಳು ಶೂಟಿಂಗ್‌ಗೆ ಬೇಕಾಯಿತು. ಆಗ ಹೇಳಿದ್ದಕ್ಕಿಂತ 10 ಸಾವಿರ ರೂಪಾಯಿ ಹೆಚ್ಚು ಸಂಭಾವನೆಯನ್ನು ಅಮ್ಮ ಕಳುಹಿಸಿದ್ದರು. ಆದರೆ ಅಶ್ವತ್ಥ್ ಅವರು ಅಮ್ಮನಿಗೆ ಮತ್ತೆ ಹಿಂತಿರುಗಿಸಿದರು. ಸಿಕ್ಕಿದಾಗಲೆಲ್ಲಾ, ನೀವು ನಿಮ್ಮ ತಂದೆ ತರಾನೇ ಅಂತಿದ್ರು. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಇಂತಹ ಸಂದರ್ಭ ಎಷ್ಟು ಕಷ್ಟ ಆಗುತ್ತೆ ಅನ್ನೋದು ನಮಗೆ ಅನಭವ ಇದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ, ನಟಿ ಜಯಮಾಲಾ- ಕೆ.ಎಸ್.ಅಶ್ವತ್ಥ್ ಅವರ ಸಾವಿನಿಂದ ಕನ್ನಡ ಚಿತ್ರರಂಗವೀಗ ಹಿರಿಯರಿಲ್ಲದ ಮನೆಯಾಗಿದೆ. ನಮ್ಮ ತಂದೆ ಹೀಗಿರಬೇಕು ಎಂದು ಮಾದರಿಯನ್ನು ಕಲ್ಪಿಸಿದವರು. ಪ್ರತಿ ಹೆಣ್ಣಾಗಲಿ ಗಂಡಾಗಲಿ ನಮ್ಮ ತಂದೆ ಹೀಗಿರಬೇಕೆಂದು ಅಂದುಕೊಳ್ಳುವ ಹಾಗೆ ಮಾಡಿದವರು. ನಿಜ ಜೀವನದಲ್ಲೂ ಅವರು ಹಾಗೆಯೇ ಬದುಕಿದ್ದರು. ಶಿಸ್ತು ಮೊದಲು ತನಗೆ, ಮತ್ತೆ ಇನ್ನೊಬ್ಬರಿಗೆ ಎಂದು ಅಂದುಕೊಳ್ಳುತ್ತಿದ್ದರು.
ನಟ ಶ್ರೀನಾಥ್- ನಾನು ಅಶ್ವತ್ಥ್ ಅವರ ಜೊತೆಗೆ 80-90 ಚಿತ್ರಗಳಲ್ಲಿ ಅಭಿನಯಿಸಿದ್ದೆ. ಅವರ ಜೊತೆ ಮೊದಲ ಚಿತ್ರದಲ್ಲಿ ಅಭಿನಯಿಸುವಾಗ ಸಾರ್ ನಗೆ ಏನಾದರೂ ಮಾರ್ಗದರ್ಶನ ನೀಡಿ ಎಂದೆ. ಆಗವರು ಹೇಳಿದ್ದು, ಚಿತ್ರರಂಗದಲ್ಲಿ ಚಿರಕಾಲ ಉಳಿಯಬೇಕೆಂದರೆ, ದೀರ್ಘಕಾಲ ಉತ್ತಮ ಪಾತ್ರಗಳಲ್ಲಿ ಅಭಿನಯಿಸಬೇಕು. ಪಾತ್ರವನ್ನು ಆಳವಾಗಿ ಅರ್ಥ ಮಾಡ್ಕೊಂಡು ನಟಿಸು, ಸಿನ್ಸಿಯಾರಿಟಿ, ಪಂಕ್ಚುವಾಲಿಟಿ ತುಂಬಾ ಮುಖ್ಯ. ಕಲಾವಿದ ಪಾತ್ರವಾಗಬೇಕೇ ಹೊರತು ಪಾತ್ರ ಕಲಾವಿದನಾಗಬಾರದು ಎಂದರು. ಅವರು ಗಂಭೀರ ವ್ಯಕ್ತಿಯಾಗಿದ್ರೂ, ತುಂಬ ಹಾಸ್ಯ ಪ್ರಜ್ಞೆಯ ವ್ಯಕ್ತಿಯಾಗಿದ್ದರು. ತನ್ನ ಇತಿಮಿತಿಯಲ್ಲಿ ಜೀವನವನ್ನು ಪ್ರೀತಿಸಿ ಬದುಕುವ ಆಸೆಯಟ್ಟವರು ಅವರು. ಅವರಿಗೆ ಮೃಷ್ಟಾನ್ನ ಭೋಜನ ಬೇಡ. ರುಚಿಯಾದ ಅನ್ನ ಸಾರಿದ್ದರೂ ಸಾಕು ಅವರಿಗೆ. ಒಟ್ಟಾರೆ ಹೃದಯವಂತ. ಇಡೀ ಚಿತ್ರರಂಗದ ತಂದೆ ಅವರು.
ನಟ ಅಂಬರೀಶ್- ನಮ್ಮ ದೇಶದ ಸೈನಿಕನಂತೆ ಅವರೊಬ್ಬ ತುಂಬ ಶಿಸ್ತು ಬದ್ದ ಕಲಾವಿದ ಅವರು. ಕಲಾವಿದರಲ್ಲಿ ಅಂತಹ ಶಿಸ್ತು ಕಾಣದು. ಅನುಕರಿಸಬಲ್ಲ ವ್ಯಕ್ತಿತ್ವ ಅವರದ್ದು.
ನಟಿ ತಾರಾ- ತುಂಬಾ ಸರಳ, ಶಿಸ್ತುಬದ್ಧ ವ್ಯಕ್ತಿತ್ವದ ಮೇಷ್ಟು ಅವರು. ಸಿನಿಮಾದಲ್ಲಿ ಅವರು ಹೇಗಿದ್ದರೋ, ಅಷ್ಟನ್ನೂ ಅವರು ತಮ್ಮ ಜೀವನದಲ್ಲೂ ಅಳವಡಿಸಿದ್ದರು. ಅವರ ಜೊತೆಗೆ ಅಭಿನಯಿಸಿದ ಭಾಗ್ಯ ನನ್ನದೂ ಕೂಡಾ.
ಪೋಷಕ ನಟ ದೊಡ್ಡಣ್ಣ- ಅಶ್ವತ್ಥ್ ಅವರು ಕನ್ನಡ ಚಿತ್ರರಂಗದ ಅಗ್ರಗಣ್ಯರು. ಹಳೆಯ ತಲೆಮಾರಿನ ಕೊಂಡಿ ಕಳಚಿಕೊಂಡಿದೆ. ಇತ್ತೀಚೆಗೆ ನಾವು ಅದ್ವಿತೀಯ ಕಲಾವಿದರನ್ನೆಲ್ಲ ಕಳೆದುಕೊಂಡಿದ್ದೇವೆ. ಅವರ ಎಲ್ಲ 370 ಚಿತ್ರಗಳ್ಲಲೂ ಪ್ರತಿ ಪಾತ್ರಕ್ಕೂ ಅವರು ಜೀವ ತುಂಬಿದ್ದಾರೆ. ಚಿತ್ರರಂಗ ಬಡವಾಗಿದೆ. ಅವರ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು- ಕೆ.ಎಸ್. ಅಶ್ವತ್ಥ್ ಅವರು ಅತ್ಯಂತ ಶಿಸ್ತಿನ ನಟರಾಗಿದ್ದರು. ಅವರೆಂದೂ ದುಡ್ಡಿಗಾಗಿ ಹಪಹಪಿಸಿದವರಲ್ಲ. ಹೆಚ್ಚು ಸಂಭಾವನೆಯನ್ನೂ ಪಡೆಯುತ್ತಿರಲಿಲ್ಲ. ಅವರೊಬ್ಬ ಅಪ್ರತಿಮ, ಅಪೂರ್ವ ನಟ.
ಹಿರಿಯ ಪೋಷಕ ನಟ ದತ್ತಣ್ಣ- ಕೆ.ಎಸ್. ಅಶ್ವತ್ಥ್ ಅವರಲ್ಲಿ ಅಹಂ ಎಂಬುದೇ ಇರಲಿಲ್ಲ. ಅಂತ ಶ್ರೇಷ್ಠ ಕಲಾವಿದರೊಬ್ಬರು ನಮ್ಮಿಂದ ದೂರವಾಗಿದ್ದಾರೆ.
ಹಿರಿಯ ನಟಿ ಬಿ.ಸರೋಜಾದೇವಿ- ಅಶ್ವತ್ಥ್ ಅವರು ನ್ಯಾಯವಂತ ಧರ್ಮವಂತ ಮನುಷ್ಯ. ಅವರ ಮಗನನ್ನು ಚಿತ್ರರಂಗ ಪೋಷಿಸಲಿ.
ಚಿತ್ರಸಾಹಿತಿ ಬಿ.ಎಲ್.ವೇಣು- ಅಶ್ವತ್ಥ್ ಅವರೊಬ್ಬ ಪ್ರಾಮಾಣಿಕ ವ್ಯಕ್ತಿ. ತನ್ನದೇ ಘನತೆ ಹೊಂದಿದ ವ್ಯಕ್ತಿಯಾಗಿದ್ದರು.
ನಿರ್ದೇಶಕ ಸಿ.ವಿ.ಶಿವಶಂಕರ್- ಅಶ್ವತ್ಥ್ ಅವರೊಬ್ಬ ಅನುಭವಿ, ಸಂಪನ್ನ, ಸಜ್ಜನ. ಅವರು ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಅಶ್ವತ್ಥ್ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು.
ನಟ ಉಮೇಶ್- ಅಶ್ವತ್ಥ್ ಅವರು ಕೊನೇವರೆಗೂ ರಂಗಭೂಮಿ ಜೊತೆ ನಂಟು ಹೊಂದಿದ್ದ ವ್ಯಕ್ತಿ. ಕಲಾವಿದರ ಕಷ್ಟಕ್ಕೆ ದನಿಯಾಗುತ್ತಿದ್ದರು.
ಸಾ.ರಾ.ಗೋವಿಂದ್- ಅಶ್ವತ್ಥ್ ಅವರ ಸಾವಿನಿಂದ ತೀವ್ರ ನೋವುಂಟಾಗಿದೆ. ಇತ್ತೀಚೆಗೆ ಚಿತ್ರರಂಗಕ್ಕೆ ಶಾಪ ಬಡಿದಂತೆ ಅನಿಸುತ್ತಿದೆ.
ಹಿರಿಯ ನಟ ಶ್ರೀನಿವಾಸ ಮೂರ್ತಿ- ಅಶ್ವತ್ಥ್ ಅವರೊಬ್ಬ ಪ್ರಾಮಾಣಿಕ ವ್ಯಕ್ತಿ. ಶಿಸ್ತು ಅನ್ನೋದು ಅವರ ದೊಡ್ಡ ಗುಣ. ಅವರು ಮಾಡದಂತಹ ಪಾತ್ರಗಳೇ ಇಲ್ಲ. ಇತ್ತೀಚೆಗೆ ಅವರು ಮಾನಸಿಕವಾಗದಿ ತುಂಬ ಕುಗ್ಗಿದ್ದರು.
ಹಿರಿಯ ಪೋಷಕ ನಟ ಲೋಕನಾಥ್- ಕೆ.ಎಸ್. ಅಶ್ವತ್ಥ್ ಅವರೊಬ್ಬ ಕನ್ನಡ ಚಿತ್ರರಂಗದ ನಿಘಂಟು. ಶಿಸ್ತುಬ್ಭ ವ್ಯಕ್ತಿ ಅವರು. ಅವರ ವೃತ್ತಿಜೀವನದಲ್ಲಿ ಎಂದಿಗೂ ಅವರು ಸಂಭಾವನೆಗೆ ಪ್ರಾಮುಖ್ಯತೆ ನೀಡಿರಲಿಲ್ಲ.
ನಟ ರಮೇಶ್ ಭಟ್- ಅಶ್ವತ್ಥ್ ಅವರ ಸಾವು ಆಘಾತ ತಂದಿದೆ. ಅತ್ಯುತ್ತಮ ನಟ ಅವರು. ಇತರರಿಗೆ ಆದರ್ಶಪ್ರಾಯರಾಗಿದ್ದರು. ಅವರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ.
ನಿರ್ದೇಶಕ ಗಿರೀಶ್ ಕಾಸರವಳ್ಳಿ- ಕೆ. ಎಸ್.ಅಶ್ವತ್ಥ್ ಅವರೊಬ್ಬ ಪ್ರಬುದ್ಧ ನಟ. ಪಾತ್ರಕ್ಕೆ ಜೀವ ತುಂಬುವ ಅಪ್ರತಿಮ ನಟ ಅವರು.
ನಟ ದ್ವಾರಕೀಶ್- ಅಶ್ವತ್ಥ್ ಅವರು ನಟನೆಯನ್ನು ಗಂಭೀರವಾಗಿ ಪರಿಣಿಸಿದ್ದರು. ಅವರೊಬ್ಬ ಶ್ರಮಜೀವಿ. ಸಹಕಲಾವಿದರಿಗೆ ಉತ್ತೇಜನ, ಕಲೆಯಲ್ಲಿ ತೃಪ್ತಿ. ಎಂದಿಗೂ ಹಣಗಳಿಕೆಗೆ ಅವರು ಪ್ರಯತ್ನಿಸಲಿಲ್ಲ.
ನಿರ್ದೇಶಕ ಜೋಸೈಮನ್- ಚಿತ್ರರಂಗ ಅಶ್ವತ್ಥ್ ಅವರನ್ನು ಸರಿಯಾಗಿ ಬಳಸಲಿಲ್ಲ. ಸಂಭಾವನೆ ವಿಚಾರದಲ್ಲಿ ಅವರು ನಿಷ್ಟುರ ವ್ಯಕ್ತಿ. ಚಿತ್ರರಂಗದ ವ್ಯಾಪಾರಿ ಮನೋಭಾವದಿಂದ ಮನನೊಂದಿದ್ದರು.