ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಅವರಿಗೆ ಬೆತ್ತದಿಂದ ಚೆನ್ನಾಗಿ ಹೊಡೆದಿದ್ರು ಈ ಅಶ್ವತ್ಥ್! (Vishnuvardhan | K.S.Ashwath | Kannada Cinema | Puttanna Kanagal)
ವಿಷ್ಣು ಅವರಿಗೆ ಬೆತ್ತದಿಂದ ಚೆನ್ನಾಗಿ ಹೊಡೆದಿದ್ರು ಈ ಅಶ್ವತ್ಥ್!
MOKSHA
ಮೇರು ನಟ ವಿಷ್ಣುವರ್ಧನ್ ಅವರಿಗೆ ಕೆ.ಎಸ್.ಅಶ್ವತ್ಥ್ ಚೆನ್ನಾಗಿ ಎರಡು ಬಾರಿಸಿದ್ದರಂತೆ! ತಮಾಷೆಯಾಗಿ ಖಂಡಿತಾ ಅಲ್ಲ. ನಿಜಕ್ಕೂ. ತಮ್ಮ ಶಕ್ತಿಯೆಲ್ಲ ಒಗ್ಗೂಡಿಸಿ ವಿಷ್ಣುವರ್ಧನ್ ಅವರಿಗೆ ಶೂಟಿಂಗ್ ಸಂದರ್ಭ ಎರಡು ಪೆಟ್ಟು ಬಿಗಿದಿದ್ದರಂತೆ. ಇದನ್ನು ಸ್ವತಃ ಕೆ.ಎಸ್. ಅಶ್ವತ್ಥ್ ಅವರೇ ಇತ್ತೀಚೆಗಷ್ಟೇ ವಿಷ್ಣು ಅವರ ಮರಣಾ ನಂತರ ತಮ್ಮ ನೆನಪಿನಾಳದಿಂದ ಹೊರಗೆಡಹಿದ್ದರು. ಆ ಅಪೂರ್ವ ಅನುಭವ ಇಲ್ಲಿದೆ.
ಹೌದು. ಅದು ನಾಗರಹಾವು ಚಿತ್ರದ ಶೂಟಿಂಗ್. ವಂಶವೃಕ್ಷ ಚಿತ್ರದಲ್ಲಿ ಚೂಯಿಂಗ್ ಗಮ್ ಜಗಿಯುತ್ತಾ ನಟಿಸಿದ ಸಂಪತ್ ಕುಮಾರ್ (ವಿಷ್ಣುವರ್ಧನ್) ಎಂಬ ಯುವಕ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಕಣ್ಣಿಗೆ ಬಿದ್ದಿದ್ದ. ಪುಟ್ಟಣ್ಣ ತಮ್ಮ ನಾಗರ ಹಾವು ಚಿತ್ರಕ್ಕೆ ಈ ಸಂಪತ್ ಕುಮಾರನನ್ನೇ ಹೀರೋ ಮಾಡಿ ವಿಷ್ಣುವರ್ಧನರನ್ನಾಗಿಸಿದರು. ನಾಗರಹಾವು ಚಿತ್ರದಲ್ಲಿ ವಿಷ್ಣು ಅವರು ತಮ್ಮ ಮೇಷ್ಟ್ರು ಚಾಮಯ್ಯ (ಕೆ.ಎಸ್.ಅಶ್ವತ್ಥ್) ಜೊತೆ ಸುಡು ಸುಡು ರೋಷಾಗ್ನಿಯಿಂದ ಮಾತನಾಡುವ ದೃಶ್ಯಗಳಿವೆ. ಹಾಗೆ ಮಾತನಾಡುವ ಸಂದರ್ಭ ಮುಖದಲ್ಲಿ ದರ್ಪವಿರುವ ಮೊಂಡುತನದ ರೋಷವನ್ನು ವಿಷ್ಣು ಅವರು ತಮ್ಮ ಮುಖದಲ್ಲಿ, ಕಣ್ಣಿನಲ್ಲಿ ವ್ಯಕ್ತಪಡಿಸಬೇಕಿತ್ತು. ಆದರೆ ಶೂಟಿಂಗ್ ವೇಳೆ ವಿಷ್ಣು ಅಭಿನಯ ಪುಟ್ಟಣ್ಣ ಅವರಿಗೆ ಇಷ್ಟವಾಗಲೇ ಇಲ್ಲ. ಏನು ಮಾಡಿದರೂ ವಿಷ್ಣು ಅವರಿಂದ ಪುಟ್ಟಣ್ಣ ಅವರಿಗೆ ಬೇಕಿದ್ದ ಅಭಿನಯ ವ್ಯಕ್ತವಾಗಲೇ ಇಲ್ಲ.
ಏನು ಮಾಡಲೆಂದು ಯೋಚಿಸಿದ ಪುಟ್ಟಣ್ಣ, ಇದಕ್ಕಾಗಿ ನೇರವಾಗಿ ಅಶ್ವತ್ಥ್ ಅವರ ಬಳಿ ಗುಟ್ಟಾಗಿ, ನಿಮ್ಮ ಸಂಭಾಷಣೆ ಮುಗಿದ ತಕ್ಷಣ ವಿಷ್ಣು ಅವರಿಗೆ ಬೆತ್ತದಿಂದ ಎರಡೇಟು ಬಾರಿಸಿ ಎಂದರಂತೆ. ನಿರ್ದೇಶಕರ ಅಣತಿಯಂತೆ ಮೇಷ್ಟ್ರು ಶಿಷ್ಯನಿಗೆ ಎರಡೇಟು ಕೊಟ್ಟರು. ಆದರೆ ಆಮೇಲೆ ತಾನು ಅಷ್ಟು ಜೋರಾಗಿ ಹೊಡೆದುಬಿಟ್ಟನಲ್ಲ ಎಂದು ತಕ್ಷಣ ಅಶ್ವತ್ಥ್ ಪುಟ್ಟಣ್ಣ ಕಡೆಗೆ ನೋಡಿದರಂತೆ. ಪುಟ್ಟಣ್ಣ ಡೋಂಟ್ ವರಿ ಎಂಬಂತೆ ಕಣ್ಸನ್ನೆ ಮಾಡಿದರು. ಆದರೆ ಹೊಡೆದ ತಕ್ಷಣ ಆ ನೋವಿನಿಂದ ವಿಷ್ಣು ಅವರಿಂದ ಸಹಜವಾದ ಅಭಿನಯ ಹೊರಬಂದಿತ್ತು. ಆ ಘಳಿಗೆಯಲ್ಲಿ ವಿಷ್ಣು ಮುಖದಲ್ಲಿ ವ್ಯಕ್ತವಾದ ಭಾವನೆ, ಅಭಿನಯ ನಿಜಕ್ಕೂ ಚಿತ್ರಕ್ಕೆ ಸರಿಹೊಂದುವಂತಿತ್ತು. ಪುಟ್ಟಣ್ಣಗೆ ಬಹಳ ಇಷ್ಟವಾದ ಆ ಶಾಟ್ ಒಕೆ ಆಯಿತು. ಹೊಡೆದದ್ದಕ್ಕೆ ವಿಷ್ಣು ಅವರು ಮಾತನಾಡದೆ ಅಭಿನಯಿಸಿದರು. ಕೋಪ ಮಾಡಲಿಲ್ಲ, ಯಾಕೆಂದರೆ, ಅಶ್ವತ್ಥ್ ಹಾಗೂ ಪುಟ್ಟಣ್ಣ ಗುಟ್ಟಾಗಿ ಮಾತನಾಡಿದ್ದನ್ನು ವಿಷ್ಣು ಮೊದಲೇ ನೋಡಿದ್ದರು ಹಾಗೂ ಅರ್ಥ ಮಾಡಿಕೊಂಡಿದ್ದರು.
ವಿಷ್ಣು ಸಾವಿನಿಂದ ವಿಪರೀತ ಮನನೊಂದಿದ್ದ ಅಶ್ವತ್ಥ್, ವಿಷ್ಣು ಇಷ್ಟು ಬೇಗ ಹೋಗುತ್ತಾನೆಂದು ಅಂದುಕೊಂಡಿರಲಿಲ್ಲ. ಮಗ ಶಂಕರ್ ಬಂದು ಮೈಸೂರಿನಲ್ಲೇ ವಿಷ್ಣು ಇಹಲೋಕ ತ್ಯಜಿಸಿದ್ದ ಸುದ್ದಿ ಬಂದು ಹೇಳಿದಾಗ ನನಗೆ ನಂಬಲಾಗಲೇ ಇಲ್ಲ. ಹೋಗುವ ವಯಸ್ಸೂ ಆತನದಲ್ಲ ಎಂದಿದ್ದರು. ವಿಷ್ಣು ಜೊತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅಶ್ವತ್ಥ್ ಇತ್ತೀಚೆಗಷ್ಟೆ ತಮ್ಮ ಸಾವಿಗೆ 15 ದಿನಗಳ ಮುಂಚೆಯಷ್ಟೆ ತಮ್ಮ ಮನದಾಳದ ಹಲವು ಚಿತ್ರರಂಗದ ನೆನಪನ್ನು ಹೊರಗಿಟ್ಟಿದ್ದರು. ಅವರ ಆ ನೆನಪುಗಳ ಪೈಕಿ ವಿಷ್ಣು ಅವರಿಗೆ ಹೊಡೆದದ್ದೂ ಒಂದು.