ಮಿನುಗು ತಾರೆ ಕಲ್ಪನಾ ಅವರ ಧ್ವನಿಯನ್ನು ಅನುಕರಿಸುವುದರಲ್ಲಿ ಪರಿಣತಿ ಪಡೆದ ಮಿಮಿಕ್ರಿ ರಾಜಗೋಪಾಲ್ ಆಪ್ತ ರಕ್ಷಕ ಚಿತ್ರದಲ್ಲಿ ಕಲ್ಪನಾರ ಧ್ವನಿಯಲ್ಲಿ ಮಾತನಾಡಿದ್ದಾರೆ.
ವಿಷ್ಣುವರ್ಧನ್ ಅತ್ಯಂತ ಸೊಗಸಾಗಿ ಕಾಣುವ ಮಹತ್ವಾಕಾಂಕ್ಷೆಯ ಚಿತ್ರ ಆಪ್ತರಕ್ಷಕ ಅನೇಕ ಕಾರಣಗಳಿಂದ ಸುದ್ದಿಯಲ್ಲಿದ್ದ ಚಿತ್ರ. ಆಪ್ತರಕ್ಷಕನಿಗೆ ನಾಗವಲ್ಲಿಯ ಕಾಟವಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಕಾಕತಾಳೀಯ ಎಂಬಂತೆ ವಿಷ್ಣು ಚಿತ್ರೀಕರಣದ ವೇಳೆ ಕುದುರೆಯಿಂದ ಬಿದ್ದು ಬೆನ್ನು ಪೆಟ್ಟು ಮಾಡಿಕೊಂಡಿದ್ದರು. ಅವಿನಾಶ್ ಡಬ್ಬಿಂಗ್ ಮಾಡಲು ಸ್ವರವೇ ಹೊರಡದೇ ಕಷ್ಟಪಟ್ಟರು. ನಾಯಕಿ ವಿಮಲಾ, ರಮೇಶ್ ಭಟ್ ಜ್ವರದಿಂದ ಬಳಲಿದರು. ಈಗ ವಿಷ್ಣುವರ್ಧನ್ ನಮ್ಮನ್ನೇ ಅಗಲಿದ್ದಾರೆ. ಇದಕ್ಕೆಲ್ಲಾ ನಾಗವಲ್ಲಿಯನ್ನು ಲಿಂಕ್ ಮಾಡಿ ಹೀಗೂ ಇರಬಹುದೇ ಎಂದು ಜನ ಮಾತಾಡಿಕೊಂಡರು. ಆದರೆ ಚಿತ್ರತಂಡ ಅದೆಲ್ಲವನ್ನೂ ತಳ್ಳಿ ಹಾಕಿ ಈಗ ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
ಆಪ್ತರಕ್ಷಕ ಸನ್ನಿವೇಶವೊಂದರಲ್ಲಿ ಕೋಮಲ್ ಮಾತನಾಡುವಾಗ ಪ್ರತಿಕ್ರಿಯೆಯಾಗಿ ಮಿಮಿಕ್ರಿ ರಾಜಗೋಪಾಲ್ ಕಲ್ಪನಾರನ್ನೇ ಅನುಕರಿಸಿ ಮಾತನಾಡುತ್ತಾರಂತೆ. ಇದು ಆಸಕ್ತಿ ಪೂರ್ಣ ಸನ್ನಿವೇಶ ಎನ್ನುತ್ತಾರೆ ರಾಜಗೋಪಾಲ್.