ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಿಗ ವಿ.ಕೆ.ಮೂರ್ತಿಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯ ಗರಿ! (Cinematographer | V K Murthy | Dada Saheb Phalke Award | Hoovu Hannu)
ಕನ್ನಡಿಗ ವಿ.ಕೆ.ಮೂರ್ತಿಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿಯ ಗರಿ!
ಮಂಗಳವಾರ, 19 ಜನವರಿ 2010( 18:15 IST )
PR
ಚಿತ್ರರಂಗದ ಇತಿಹಾಸದಲ್ಲಿ ದಂತಕಥೆಯಾದ ಸಿನಿಮಾ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರಿಗೆ 2008ರ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ದೊರೆತಿದೆ. ಮೂಲತಃ ಮೈಸೂರಿನವರಾದ ವಿ.ಕೆ.ಮೂರ್ತಿ ಅವರಿಗೆ ಫಾಲ್ಕೆ ಪ್ರಶಸ್ತಿ ಸಿಗುವ ಮೂಲಕ ಕನ್ನಡದ ಕಿರೀಟಕ್ಕೊಂದು ಮತ್ತೊಂದು ಫಾಲ್ಕೆ ಗರಿ ಸೇರಿದೆ.
ಸಿನಿಮಾರಂಗದ ಛಾಯಾಗ್ರಹಣ ವಿಭಾಗದಲ್ಲಿ ಫಾಲ್ಕೆ ಪ್ರಶಸ್ತಿ ಪಡೆದುದು ಇತಿಹಾಸದಲ್ಲೇ ಮೊದಲು. ಈ ಮೊದಲು ಇತಿಹಾಸದಲ್ಲೇ ಯಾವ ಛಾಯಾಗ್ರಾಹಕರಿಗೂ ಫಾಲ್ಕೆ ಪ್ರಶಸ್ತಿ ದೊರೆತಿಲ್ಲ. ಅದರಲ್ಲೂ ಕನ್ನಡಿಗರೊಬ್ಬರಿಗೆ ದೊರೆತಿರುವುದು ಕನ್ನಡ ನಾಡಿಗೆ ಹೆಮ್ಮೆಯ ಸಂಗತಿಯೇ ಸರಿ. ಡಾ. ರಾಜ್ ನಂತರ ಮತ್ತೊಬ್ಬ ಕನ್ನಡಿಗನಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ. ಕನ್ನಡದಲ್ಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಹೂವು ಹಣ್ಣು ಚಿತ್ರವೊಂದೇ ಇವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಕನ್ನಡ ಚಿತ್ರ. ಈ ಚಿತ್ರದಲ್ಲಿ ಅವರು ನಟನೆಯನ್ನೂ ಮಾಡಿದ್ದರು ಅನ್ನುವುದು ವಿಶೇಷ.
ತಮಗೆ ಪ್ರಶಸ್ತಿ ಸಿಕ್ಕಿದ ಸುದ್ದಿ ಕೇಳಿ ವಿ.ಕೆ.ಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ತಾನು ಗ್ರಹಿಸಿದೆ ಬಂದ ಪ್ರಶಸ್ತಿ ಇದು. ನನಗೆ ಅತೀವ ಸಂತಸವಾಗುತ್ತಿದೆ ಎಂದು ವಿ.ಕೆ.ಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿ.ಕೆ.ಮೂರ್ತಿ ಕನ್ನಡದವರಾದರೂ ಮಿಂಚಿದ್ದು ಹಿಂದಿ ಚಿತ್ರರಂಗದಲ್ಲಿ. ಹಿಂದಿಯ ಹಲವಾರು ಚಿತ್ರಗಳಿಗೆ ತಮ್ಮ ಅತ್ಯಪೂರ್ವ ಕ್ಯಾಮರಾ ಕೈಚಳಕದ ಕಾರಣದಿಂದ ಆ ಚಿತ್ರಗಳನ್ನು ಕ್ಲಾಸಿಕ್ ಮಟ್ಟಕ್ಕೇರಿಸಿದವರು ಈ ವಿ.ಕೆ.ಮೂರ್ತಿ. ಹಿಂದಿ ಚಿತ್ರರಂಗದ ದಂತಕಥೆ ಗುರುದತ್ ಅವರ ಎಲ್ಲ ಚಿತ್ರಗಳಿಗೂ ಛಾಯಾಗ್ರಹಣ ಮಾಡಿದ ಹೆಮ್ಮೆ ಇವರದು. ಭಾರತದ ಮೊತ್ತಮೊದಲ 75ಎಂಎಂ ಕ್ಯಾಮರಾದಲ್ಲಿ ಚಿತ್ರೀಕರಣ ನಡೆಸಿದ ಹೆಗ್ಗಳಿಕೆಯೂ ಇದೇ ವಿ.ಕೆ.ಮೂರ್ತಿ ಅವರದ್ದು. ಮೂಲತಃ ಪಿಟೀಲು ವಾದಕರಾಗಿದ್ದ ಮೂರ್ತಿ ಆಮೇಲೆ ಸಿನಿಮಾ ಛಾಯಾಗ್ರಾಹಕರಾದರು. ಅತ್ಯಂತ ಶ್ರೇಷ್ಠ ಚಿತ್ರಗಳೆಂದು ಇಂದಿಗೂ ಚಿತ್ರರಂಗದಲ್ಲಿ ಅದರದ್ದೇ ಆದ ಸ್ಥಾನ ಪಡೆದಿರುವ, ಹಲವು ಪ್ರಶಸ್ತಿಗಳನ್ನು ಪಡೆದ 'ಕಾಗಝ್ ಕೇ ಫೂಲ್', 'ಸಾಹಬ್ ಬೀವಿ ಔರ್ ಗುಲಾಮ್'ನಂತಹ ಕ್ಲಾಸಿಕ್ ಚಿತ್ರಗಳಿಗೆ ಕ್ಯಾಮರಾ ಹಿಡಿದ ಶ್ರೇಷ್ಠತೆ ಇವರದ್ದು.
ಬಾಝಿ, ಜಾಲ್, ಚೌದಾವಿನ್ ಕಾ ಚಾಂದ್, ಪ್ಯಾಸಾ, ಝಿದ್ದಿ, ಲವ್ ಇನ್ ಟೋಕಿಯೋ ಸೇರಿದಂತೆ ಹಲವಾರು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಕೀರ್ತಿ ಇವರದ್ದು. ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ದುಡಿದ ಇವರು 50ರ ದಶಕದ್ಲಲಿ ಶ್ಯಾಮ್ ಬೆನಗಲ್ ಅವರ ಖ್ಯಾತ ಮೆಗಾ ಸೀರಿಯಲ್ ಭಾರತ್ ಏಕ್ ಖೋಜ್‌ಗಾಗಿ ಗುರುದತ್ ಜೊತೆಗೇ ಕೆಲಸ ಮಾಡಿದವರು.
1923ರಲ್ಲಿ ಮೈಸೂರಿನಲ್ಲಿ ಜನಿಸಿದ ವಿ.ಕೆ.ಮೂರ್ತಿ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ ಕಾಲೇಜಿನಲ್ಲಿ ಸಿನೆಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ನಂತರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿ 1943ರಲ್ಲಿ ಜೈಲು ಸೇರಿದ ಅನುಭವವೂ ಇವರಿಗಿದೆ. ಹಲವು ದಶಕಗಳ ಕಾಲ ಮುಂಬೈನಲ್ಲೇ ವಾಸವಾಗಿದ್ದು ಹಿಂದಿ ಚಿತ್ರಗಳಿಗೆ ಛಾಯಾಗ್ರಹಣ ಮಾಡುತ್ತಿದ್ದ ಮೂರ್ತಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 2005ರಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಫಿಲಂಫೇರ್ ಅವಾರ್ಡ್ಸ್‌ನಲ್ಲಿ ಜೀವನಸಾಧನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಸದ್ಯದಲ್ಲೇ ರಾಷ್ಟ್ರಪತಿಗಳು ನವದೆಹಲಿಯಲ್ಲಿ ಫಾಲ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಿದ್ದಾರೆ. ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಬಹುಮಾನ, ಸ್ವರ್ಣಕಮಲ ಫಲಪುಷ್ಪ ಹಾಗೂ ಶಾಲನ್ನು ಒಳಗೊಂಡಿದೆ.
ಗಿರೀಶ್ ಕಾಸರವಳ್ಳಿ: ಕನ್ನಡಿಗನಿಗೆ ಈ ಅತ್ಯಪೂರ್ವ ಪ್ರಶಸ್ತಿ ದೊರೆತಿರುವುದು ಹೆಮ್ಮೆಯೆನಿಸಿದೆ. ಚಿತ್ರರಂಗದ ಛಾಯಾಗ್ರಹಣದಲ್ಲಿ ಅವರು ವಿಶಿಷ್ಟ ಛಾಪು ಮೂಡಿಸಿದವರು. ತಮ್ಮ ಬೆಳಕಿನ ವಿನ್ಯಾಸದ ಮೂಲಕ ವಿಶಿಷ್ಟತೆ ಮೆರೆದವರು. ಛಾಯಾಗ್ರಹಣವೆಂದರೆ ಕೇವಲ ಫ್ರೇಮ್ ಅಲ್ಲ. ಅದೂ ಒಂದು ಕ್ರಿಯೇಟಿವ್ ಕಲೆ ಎಂದು ರೂಪಿಸಿದವರು. ಅವರು ಇಡೀ ಸಿನಿಮಾ ಪರಿಭಾಷೆಗೇ ಅರ್ಥ ಕೊಟ್ಟವರು. ತುಂಬ ಖುಷಿ ಆಗಿದೆ.
ಎಸ್.ವಿ.ರಾಜೇಂದ್ರಸಿಂಗ್ ಬಾಬು: ವಿ.ಕೆ.ಮೂರ್ತಿ ಅವರು ಒಬ್ಬ ಅದ್ಭುತ ಕ್ಯಾಮರಾಮನ್. ಅದಕ್ಕಾಗಿ ಅವರನ್ನು ಹೂವುಹಣ್ಣು ಚಿತ್ರದಲ್ಲಿ ಹಾಕಿಕೊಂಡೆ. ಅವರು ತುಂಬ ಕ್ರಿಯೇಟಿವ್. ಅವರ ಕೈಮರಾ ಕೈಚಳಕ ತುಂಬ ಅದ್ಭುತವಾದುದು. ರವಿವರ್ಮ ಪೈಂಟಿಂಗ್ ಹಾಗೆ ಅವರ ಕ್ಯಾಮರಾ ಚಿತ್ರಗಳು. ಅದಕ್ಕಿಂತಲೂ ಅವರೊಬ್ಬ ಕನ್ನಡಿಗರು ಎಂಬುದಕ್ಕೆ ತಂಬ ಖುಷಿಯಾಗುತ್ತಿದೆ. ಅವರ ಜೊತೆಗೆ ನಾನು ಕೆಲಸ ಮಾಡಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ಇದು ಕರ್ನಾಟಕಕ್ಕೆ ಹೆಮ್ಮೆ.