ತಾಜ್‌ಮಹಲ್ ಖ್ಯಾತಿಯ ನಿರ್ದೇಶಕ ಆರ್. ಚಂದ್ರು ತಮ್ಮ ಮಳೆ ಚಿತ್ರವನ್ನು ಶುರು ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ ಪ್ರೇಮ್ ನಾಯಕರೆಂದು ಚಂದ್ರು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರು. ನಿರ್ದೇಶಕ ಪ್ರೇಮ್ ಸಹ, ಚಂದ್ರು ಚಿತ್ರದಲ್ಲಿ ತಾನು ನಟಿಸಲಿದ್ದೇನೆ ಎಂಬ ಆಶ್ವಾಸನೆ ಕೊಟ್ಟಿದ್ದರಂತೆ. ಆದರೆ ಈ ಚಿತ್ರ ಪ್ರಾರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ.
ಹೆಚ್ಚುಕಡಿಮೆ ಪ್ರೇಮ್ ಹಾಗೂ ಚಂದ್ರು ಇಬ್ಬರೂ ಅಣ್ಣತಮ್ಮಂದಿರಂತೆ ಕಾಣುತ್ತಾರೆ. ಚಿತ್ರದ ಪ್ರಚಾರದ ವಿಚಾರದಲ್ಲೂ ಈ ಇಬ್ಬರು ಹೆಚ್ಚು ಕಡಿಮೆ ಒಂದೇ ಥರ ಹೈಪ್ ಸೃಷ್ಟಿಸುತ್ತಾರೆ ಎಂಬ ಮಾತಿದೆ. ಅದೇನೇ ಇರಲಿ, ಈಗ ಕೆಲವು ಮೂಲಗಳ ಪ್ರಕಾರ ಮಳೆ ಚಿತ್ರದಲ್ಲಿ ಪ್ರೇಮ್ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇಬ್ಬರೂ ನಿರ್ದೇಶಕರೇ ಆದ ಕಾರಣ ಇಬ್ಬರ ಜೋಡಿ ಗಾಂಧಿನಗರದಲ್ಲಿ ಉತ್ತಮ ನಿರೀಕ್ಷೆ ಹುಟ್ಟಿಸಿತ್ತು. ಈಗ ಎಲ್ಲವೂ ಠುಸ್ ಆಗಿದೆ. ಚಂದ್ರು ಪ್ರೇಮ್ ಅರನ್ನು ಹಾಕಿಕೊಂಡು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಹೊರಬಿದ್ದ ಸಂದರ್ಭವೇ ಎಸ್. ನಾರಾಯಣ್ ಕೂಡಾ ಪ್ರೇಮ್ ಅವರನ್ನು ಹಾಕಿಕೊಂಡು ಚಿತ್ರ ಮಾಡುತ್ತಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿತ್ತು. ಆದರೆ ಪ್ರೇಮ್ ನಿಜಕ್ಕೂ ಯಾರ ಜೊತೆ ಚಿತ್ರ ಮಾಡುತ್ತಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.