ತಮಿಳು ಹಾಗೂ ತೆಲುಗು ನಟಿ ತಮನ್ನಾ ಸದ್ಯಕ್ಕೆ ಭಾರೀ ಬೇಡಿಕೆ ಕುದುರಿಸಿಕೊಂಡ ನಟಿ. ಈಕೆ ಕನ್ನಡಕ್ಕೆ ಬರ್ತಾಳೆ ಅನ್ನೋ ಸುದ್ದಿಯೀಗ ಸುತ್ತುತ್ತಿದೆ. ಅದಕ್ಕೆ ಕಾರಣ ನಿರ್ದೇಶಕ ಪ್ರೇಮ್.
ನಟ ಹಾಗೂ ನಿರ್ದೇಶಕ ಪ್ರೇಮ್ ಸದ್ಯ ಜೋಗಯ್ಯ ಚಿತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಎಂದುಕೊಂಡರೆ ಅದು ಸರಿ. ಅವರು ಎಸ್.ನಾರಾಯಣ್ ಚಿತ್ರದಲ್ಲಿ ನಟಿಸುತ್ತಾರೆ, ಅಥವಾ ಆರ್.ಚಂದ್ರು ಚಿತ್ರದಲ್ಲಿ ನಟಿಸುತ್ತಾರೆಂದು ಸುದ್ದಿ ಬಂದ ಬೆನ್ನಿಗೇ ಇದೀಗ ಡವ್ ಹೆಸರಿನ ಚಿತ್ರವೂ ಪ್ರೇಮ್ ಹಿಂದೆ ಸುತ್ತುತ್ತಿದೆ. ಡವ್ ಶೀರ್ಷಿಕೆಯ ಚಿತ್ರವೊಂದರಲ್ಲಿ ಪ್ರೇಮ್ ನಟಿಸಲು ತಯಾರಿ ಮಾಡಿಕೊಂಡರೆ, ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಹೊಸಬ ಯಶವಂತ್ ಈ ಚಿತ್ರ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಯಿದೆ. ಈಗೇನಿದ್ದರೂ, ಈ ಸುದ್ದಿಯೂ ಹಳತಾಗಿದ್ದರೂ, ಸದ್ಯಕ್ಕೆ ಹೊಸ ಸುದ್ದಿಯೇನೆಂದರೆ ಚಿತ್ರತಂಡ ನಟಿ ತಮನ್ನಾಳನ್ನು ಪ್ರೇಮ್‌ಗೆ ನಾಯಕಿಯಾಗಿ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಲ್ಲು ಹಬ್ಬಿದೆ.
ಮೂಲಗಳ ಪ್ರಕಾರ ಜೋಗಯ್ಯ ಚಿತ್ರಕ್ಕಿಂತ ಮುಂಚೆಯೇ ಡವ್ ಚಿತ್ರ ಬಿಡುಗಡೆಯಾಗುತ್ತದೆಯಂತೆ. ಒಂದು ಕಡೆ ಶಿವಣ್ಣನ ಜೋಗಯ್ಯ ನಿರ್ದೇಶನ ಮಾಡಬೇಕು ಮತ್ತೊಂದೆಡೆ ಡವ್ ಚಿತ್ರದಲ್ಲಿ ನಟಿಸಬೇಕು. ಏನೋಪ್ಪಾ.. ಏನ್ ಮಾಡ್ತಾರೋ ಆ ದೇವ್ರಿಗೇ ಗೊತ್ತು ಅಂತ ಗಾಂಧಿನಗರದ ಗಾಸಿಪ್ಪಿಗರು ತಲೆ ಮೇಲೆ ಕೈಹೊತ್ತಿದ್ದಾರಂತೆ.