ಹೌದು. ಈಗ ನಿರ್ದೇಶಕ ಪ್ರೇಮ್ ಪತ್ರಕರ್ತರಾಗಿದ್ದಾರೆ. ಇದು ಪ್ರೇಮ್ ಸ್ಪೆಷಾಲಿಟಿ. ಮೊದಲಿನಿಂದಲೂ ಚಿತ್ರ ಮುಹೂರ್ತಕ್ಕೂ ಮುನ್ನ ಸುದ್ದಿ ಮಾಡುವುದು ಇವರ ಹವ್ಯಾಸವೋ, ಅಭ್ಯಾಸವೋ, ಒಟ್ಟಾರೆ ಭರ್ಜರಿ ಸುದ್ದಿಯಂತೂ ಮಾಡುತ್ತಾರೆ. ಬಹುಶಃ ಅದಕ್ಕಾಗಿಯೇ ಇದೀಗ ಪತ್ರಕರ್ತರಾಗಿರುವುದು ಅನಿಸುತ್ತದೆ!
ಶಿವರಾಜ್ ಕುಮಾರ್ ಅಭಿನಯದ 100ನೇ ಚಿತ್ರ ಜೋಗಯ್ಯ ಶುರುವಾಗುವುದಕ್ಕೂ ಮುನ್ನವೇ ಸುದ್ದಿಯಾಗುತ್ತಿದೆ. ಈ ಮೊದಲು ಇವರಿಬ್ಬರ ಕಾಂಬಿನೇಷನ್ನಲ್ಲಿ ಬಿಡುಗಡೆಯಾದ ಜೋಗಿಯ ಎರಡನೇ ಭಾಗವಾಗಿ ಮೂಡಿ ಬರುತ್ತಿದ್ದಾನೆ ಜೋಗಯ್ಯ. ಅಂದ ಹಾಗೆ ಪ್ರೇಮ್ ಒಂದು ಹೆಜ್ಜೆ ಮುಂದೆ ಹೋಗಿ ಥೇಟ್ ಪತ್ರಕರ್ತರಂತೆ, ಚಿತ್ರೋದ್ಯಮದ ಟಾಪ್ 12 ನಾಯಕರು, 12 ನಾಯಕಿಯರ ಲಿಖಿತ ಅನಿಸಿಕೆ ಪಡೆದಿದ್ದಾರೆ. ಈಗಾಗಲೇ ಗಣೇಶ್, ದರ್ಶನ್, ಶರ್ಮಿಳಾ ರೇಖಾ ಸೇರಿದಂತೆ ಹಲವು ಖ್ಯಾತರೊಡನೆ ಚರ್ಚಿಸಿದ್ದಾರಂತೆ ಪ್ರೇಮ್.
ಅಂತೂ ಎಲ್ಲರಲ್ಲಿಯೂ ಅಭಿಪ್ರಾಯ ಸಂಗ್ರಹಿಸಿರುವ ಪ್ರೇಮ್ ಜನವರಿ 22ರಿಂದ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲ, ಅದೇ ದಿನ ಚಿತ್ರದ ನಾಯಕಿಯರ ಬಗ್ಗೆ ಹೇಳುವುದಾಗಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿ ಮತ್ತೆ ಸುದ್ದಿ ಮಾಡಲು ಹೊರಟಿದ್ದಾರೆ. ಒಟ್ಟಾರೆ ಪ್ರೇಮ್ ಗಾಂಧಿನಗರದಲ್ಲಿದ್ದರೆ ಸುದ್ದಿಗೇನೂ ಕೊರತೆಯಿಲ್ಲ ಎನ್ನಲಡ್ಡಿಯಿಲ್ಲ.