ಕಿಟ್ಟಿ ಮದುವೆಯಾಗುತ್ತಿದ್ದಾರೆ!!! ಅವರೀಗಾಗಲೇ ರವಿ ಬೆಳೆಗೆರೆ ಮಗಳು ಭಾವನಾರನ್ನು ಮದುವೆಯಾಗಿದ್ದಾರಲ್ಲ, ಇದೇನಪ್ಪಾ ಹೊಸ ಸುದ್ದಿ ಅಂತ ಹುಬ್ಬೇರಿಸಬೇಡಿ. ಈ ಬಾರಿ ಅವರು ಮದುವೆಯಾಗುತ್ತಿರುವುದು ತೆರೆಯ ಮೇಲೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ರಮ್ಯ ಜೊತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ನೈಜತೆ ಮೂಡಿ ಬರಲೆಂಬ ಕಾರಣಕ್ಕಾಗಿ ಚಿತ್ರದ ಪಾತ್ರಕ್ಕೆ ತಕ್ಕಂತೆ ಶ್ರೀನಗರ ಕಿಟ್ಟಿ ಒಂದು ತಿಂಗಳು ಶ್ರಮಿಸಿದ್ದಾರಂತೆ. ಕುರುಚಲು ಗಡ್ಡ, ಮೀಸೆ ತಲೆ ತುಂಬಾ ಕೆದರಿದ ಕೂದಲು, ಆಹಾರ ಇಲ್ಲದೆ ಕೃಷವಾದ ದೇಹ ಬರಿಸಿಕೊಳ್ಳಲು ಸಾಕಷ್ಟು ಕೆಲಸ ಮಾಡಿದ್ದಾರೆ. ಅದಕ್ಕಾಗಿ ಊಟ ಕೂಡ ಬಿಟ್ಟಿದ್ದರಂತೆ.
ಯಾರೇ ಈ ಚಿತ್ರವನ್ನು ನೋಡಿದರೂ ಸಂಜು ಪಾತ್ರ ಮಾತ್ರ ಮರೆಯಲ್ಲ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಟ ಕಿಟ್ಟಿ. ಚಂದದ ತಣ್ಣನೆಯ ಮಂಜಿನ ನಗರಿಗಳಲ್ಲಿ ಶೂಟಿಂಗ್‌ಗಾಗಿತೆರಳಿ ಸಾಕಷ್ಟು ಮೈನವಿರೇಳಿಸುವ ತಾಜಾ ದೃಶ್ಯಗಳನ್ನೂ ಹೊತ್ತು ತಂದಿದ್ದಾರೆಂಬ ಸುದ್ದಿಯಿದೆ. ಒಟ್ಟಾರೆ, ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನು ಶೀಘ್ರವೇ ಬಿಡುಗಡೆಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ನಿರ್ದೇಶಕ ನಾಗಶೇಖರ್. ಈ ಮೊದಲು ಇವರ ನಿರ್ದೇಶನದ ಅರಮನೆ ಚಿತ್ರಕ್ಕೆ ಪ್ರೇಕ್ಷಕರಿಂದ ಸಾಮಾನ್ಯ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ, ಮಾಡಿದ ಖರ್ಚಿಗೇನೂ ಕೊರತೆಯಾಗದಂತೆ ಪ್ರೇಕ್ಷಕರು ತೀರ್ಪು ನೀಡಿದ್ದರು. ಈ ಬಾರಿ ಉತ್ತಮ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದಾರೆ ನಾಗಶೇಖರ್.