ಡಾ.ವಿಷ್ಣುಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಗೆ ರಾಜ್ಯ ಶಿಫಾರಸು
MOKSHA
ಇತ್ತೀಚೆಗೆ ನಿಧನರಾದ ಕನ್ನಡದ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಮರಣೋತ್ತರ ಪದ್ಮಭೂಷಣ ಪ್ರಶಸ್ತಿಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಸ್ವತಃ ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾದ ಶಿಫಾರಸು ಪತ್ರ ರವಾನೆಯಾಗಿದ್ದು, ಪತ್ರದಲ್ಲಿ ಬರುವ ಪದ್ಮಭೂಷಣ ಪ್ರಶಸ್ತಿಯನ್ನು ರಾಜ್ಯದ ಅನುಭವಿ ನಟ ದಿ.ವಿಷ್ಣುವರ್ಧನ್ ಹಾಗೂ ಅನುಭವಿ ವೈದ್ಯ ಡಾ.ದೇವಿ ಶೆಟ್ಟಿ ಅವರಿಗೆ ನೀಡಬಹುದು ಎಂದು ಶಿಫಾರಸು ಪತ್ರ ಕಳುಹಿಸಲಾಗಿದೆ. ಪತ್ರದಲ್ಲಿ ಈ ಇಬ್ಬರೂ ಪದ್ಮಭೂಷಣ ಪ್ರಶಸ್ತಿಗೆ ಅರ್ಹರೆಂಬ ಅಗತ್ಯ ಮಾಹಿತಿಗಳನ್ನೂ ನೀಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ 200 ಚಿತ್ರಗಳಲ್ಲಿ ಅಭಿನಯಿಸಿರುವ ವಿಷ್ಣುವರ್ಧನ್ ಅವರು ಇತ್ತೀಚೆಗಷ್ಟೆ ನಿಧನರಾಗಿದ್ದು, ಅವರೊಬ್ಬ ಅಭಿಜಾತ ಕಲಾವಿದ. ಈಗಾಗಲೇ ಹತ್ತು ಹಲವು ಪ್ರಶಸ್ತಿ ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದಿದ್ದು, ಅಭಿನಯ ಕಲೆಯಲ್ಲಿ ಉತ್ತುಂಗಕ್ಕೇರಿದ್ದರು. ಇವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬಹುದಾಗಿದೆ ಎಂದು ಪತ್ರದಲ್ಲಿ ಸಾರಾಂಶ ಇದೆ. ಇದಲ್ಲದೆ, ಡಾ.ದೇವಿ ಶೆಟ್ಟಿ ಅವರೂ ಕೂಡಾ ವೈದ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವಷ್ಟೇ ಅಲ್ಲ, ಭಾರತ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇವರೂ ಕೂಡಾ ಪದ್ಮಭೂಷಣ ಪ್ರಶಸ್ತಿಗೆ ಅರ್ಹರೆಂಬುದು ಈ ಪತ್ರದ ಒಕ್ಕಣೆ. ಕೇಂದ್ರ ಈ ನಿಟ್ಟಿನಲ್ಲಿ ಗಮನ ಹರಿಸಿ ಪ್ರಶಸ್ತಿ ನೀಡುತ್ತದೋ ಎಂಬುದಕ್ಕೆ ಕಾದು ನೋಡಬೇಕು.