ನಿರ್ದೇಶಕ ಗುರು ಪ್ರಸಾದ್ ಅವರ ಹೊಸ ಚಿತ್ರ ಡೈರೆಕ್ಟರ್ ಸ್ಪೆಷಲ್‌ನಲ್ಲಿ ನಟ ಉಪೇಂದ್ರ ಅಭಿನಯಿಸುತ್ತಾರೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಹರಡಿತ್ತು. ಆದರೆ ಇದೀಗ ಗುರುಪ್ರಸಾದ್, ತಮ್ಮ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾನು ಹೆಚ್ಚು ಹಣ ವೆಚ್ಚ ಮಾಡದೆ, ಕಡಿಮೆ ದುಡ್ಡಲ್ಲಿ ಚಿತ್ರ ಮಾಡಬೇಕೆಂದಿದ್ದೇನೆ. ಉಪೇಂದ್ರ ಅವರಿಗೆ ಕೊಡುವ ಸಂಭಾವನೆಯಲ್ಲೇ ನಾನೊಂದು ಚಿತ್ರ ಮಾಡಬಲ್ಲೆ. ನನ್ನ ಚಿತ್ರಕ್ಕೆ ಅವರು ನಾಯಕನಾಗುತ್ತಿಲ್ಲ. ಇಂಥ ಗಾಸಿಪ್‍ಗಳೆಲ್ಲ ಎಲ್ಲಿಂದ ಉದ್ಭವವಾಗುತ್ತಿದೆಯೋ ನನಗರ್ಥವಾಗುತ್ತಿಲ್ಲ ಎಂದಿದ್ದಾರೆ ಗುರುಪ್ರಸಾದ್.
ಕೋಮಲ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದರು. ಆದರೆ ಅವರು ತಾನು ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಇದೇ ಚಿತ್ರರಂಗವನ್ನು ವ್ಯಂಗ್ಯ ಮಾಡುವ ಮಟ್ಟಕ್ಕೇರಲಾರೆ ಎಂಬು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ, ಚಿತ್ರದಿಂದ ಹೊರ ಬಿದ್ದರು. ಮೊದಲು ಕೋಮಲ್ ಅವರನ್ನೇ ತಲೆಯಲ್ಲಿಟ್ಟುಕೊಂಡು ಗುರು ಚಿತ್ರಕಥೆ ರಚಿಸಿದ್ದರಂತೆ. ಅನಿವಾರ್ಯ ಕಾರಣಗಳಿಂದ ಎಲ್ಲವೂ ಬದಲಾಗುತ್ತಿದೆ. ಮುಂದಿನ ಏಳೆಂಟು ದಿನಗಳೊಳಗಾಗಿ ಚಿತ್ರದ ನಾಯಕನ ಘೋಷಣೆಯಾಗಲಿದೆ ಎನ್ನುತ್ತಾರೆ ಗುರು.
ಸದ್ಯ ಗುರುಪ್ರಸಾದ್ ಮಕ್ಕಳ ಅನಿಮೇಷನ್ ಚಿತ್ರವೊಂದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಭಾರತದ ಎಲ್ಲಾ ಭಾಷೆಗಳಿಗೂ ಈ ಚಿತ್ರವನ್ನು ಡಬ್ ಮಾಡಲು ಗುರು ಯೋಚಿಸಿದ್ದಾರೆ. ಬೇಸಿಗೆ ರಜೆಗೆ ಈ ಚಿತ್ರ ಬಿಡುಗಡೆ ಮಾಡುತ್ತೇನೆ ಎನ್ನುತ್ತಾರೆ ಗುರುಪ್ರಸಾದ್.