ವಿಷ್ಣುವರ್ಧನ್ ಮತ್ತು ಸುಹಾಸಿನಿ ಜೋಡಿ ತುಂಬ ಜನಪ್ರಿಯ ಜೋಡಿಗಳಲ್ಲೊಂದು. ಇದಕ್ಕೆ ಇತಿಹಾಸವೇ ಇದೆ. ಈಗ ಮತ್ತೆ ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಈ ಜೋಡಿ ಮತ್ತೆ ಜೋಡಿಯಾಗಿದೆ. ಬಂಧನ, ಮುತ್ತಿನ ಹಾರ ಚಿತ್ರಗಳು ಆ ಕಾಲದಲ್ಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದವು. ಆದರೆ ಸ್ಕೂಲ್ ಮಾಸ್ಟರ್ ಇವರಿಬ್ಬರ ಜೋಡಿಯ ಅಂತಿಮ ಚಿತ್ರ. ಮತ್ತೆಂದೂ ಇವರಿಬ್ಬರ ಚಿತ್ರ ತೆರೆಯ ಮೇಲೆ ಮೂಡಿ ಬರಲು ಸಾಧ್ಯವಿಲ್ಲ ಎಂಬುದು ವಿಷ್ಣು ಅಭಿಮಾನಿಗಳ ಕೊರಗು. ಇದೇ ಬೇಸರ ನಟಿ ಸುಹಾಸಿನಿ ಅವರಿಗೂ ಇದೆ.
ವಿಷ್ಣು ಇಲ್ಲದೆ ಸ್ಕೂಲ್ ಮಾಸ್ಟರ್ ಚಿತ್ರವನ್ನು ತಾನೊಬ್ಬಳೆ ನೋಡುವುದಾದರೂ ಹೇಗೆ ಎಂದು ಸುಹಾಸಿನಿ ಭಾವುಕರಾಗುತ್ತಾರೆ. ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ವಿಷ್ಣು ಪತ್ನಿ ಪಾತ್ರದಲ್ಲಿ ನಟಿಸಿರುವ ಸುಹಾಸಿನಿ ವಿಷ್ಣು ಅಭಿನಯದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ.
ವಿಷ್ಣು ಸಾರ್ ಎಲ್ಲವನ್ನೂ ಒಂದೇ ಶಾಟ್‌ನಲ್ಲಿ ಅಭಿನಯಿಸಿ ಮುಗಿಸುತ್ತಾರೆ. ಸನ್ನಿವೇಶವೊಂದರಲ್ಲಿ ನಮ್ಮ ಮಗಳು ಸತ್ತಿರುತ್ತಾಳೆ. ಅದು ಅವರೊಬ್ಬರಿಗೆ ಮಾತ್ರ ತಿಳಿದಿರುತ್ತದೆ. ಅದನ್ನು ನನ್ನ ಬಳಿ ಹೇಳಿಕೊಳ್ಳಲಾಗದೆ ಪರಿತಪಿಸುತ್ತಾರೆ. ಆ ಪರಿತಪಿಸುವ ಭಾವವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಸುಹಾಸಿನಿ.