ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ದೇಹದಾನ ಮಾಡಲು ನಿರ್ಧರಿಸಿದ್ದಾರೆ. ಹಾಗೆಂದು ಸ್ವತಃ ರಾಘವೇಂದ್ರ ರಾಜ್ ಕುಮಾರ್ ಹಿರಿಯೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ಹಾಗೂ ಸಹೋದರರಾದ ಪುನೀತ್ ಹಾಗೂ ಶಿವರಾಜ್ ಕುಮಾರ್ ಸಂಶೋಧನೆಗೆ ನಮ್ಮ ದೇಹದಾನ ಮಾಡಲು ನಿರ್ಧರಿಸಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಹಿರಿಯೂರಿನ ಹರಿಯಬ್ಬೆ ಗ್ರಾಮದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿದ ಸಂದರ್ಭ ಹೇಳಿದರು.
ಒಮ್ಮೆ ನಮ್ಮ ಅಪ್ಪಾಜಿ ರಾಜ್ ಕುಮಾರ್ ಅವರಿದ್ದಾಗ ನಾರಾಯಣ ನೇತ್ರಾಲಯದ ಮುಖ್ಯ ವೈದ್ಯರಾದ ಡಾ.ಕೆ.ಭುಜಂಗ ಶೆಟ್ಟಿ ಅವರು ನಮ್ಮ ಮನೆಗೆ ಬಂದು ಅಪ್ಪಾಜಿ ಬಳಿಯಲ್ಲಿ ನಿಮ್ಮ ಕಣ್ಣುಗಳನ್ನು ದಾನ ಮಾಡಿ ಎಂದರು. ಅದಕ್ಕೆ ಅಪ್ಪಾಜಿಯವರು ಆಗಲೇ ಭುಜಂಗ ಶೆಟ್ಟರಲ್ಲಿ ಈಗಲೇ ನನ್ನ ಒಂದು ಕಣ್ಣು ತೆಗೆದುಬಿಡಿ. ನನಗೊಂದು ಕಣ್ಣು ಸಾಕು ಎಂದರು. ಆಗ ಭುಜಂಗ ಶೆಟ್ಟರು, ನಿಧನರಾದ ಮೇಲೆ ಕಣ್ಣು ದಾನ ಮಾಡಿದರೆ ಸಾಕು. ಈಗ ಬೇಡ ಎಂದರು. ಆದರೆ ಅಪ್ಪಾಜಿಯವರು, ನಾನೀಗಾಗಲೇ ಸಾಕಷ್ಟು ಈ ಕಣ್ಣುಗಳಿಂದ ಪ್ರಪಂಚವನ್ನು ನೋಡಿದ್ದೇನೆ. ನನಗೊಂದು ಕಣ್ಣು ಸಾಕಾಗುತ್ತದೆ. ಇನ್ನೊಂದು ಕಣ್ಣು ತೆಗೆದುಕೊಂಡು ಯಾರಾದರೂ ಕಣ್ಣು ಕಾಣದವರಿಗೆ ನೀಡಿ ಎಂದರಂತೆ. ಆದರೆ ವೈದ್ಯರು ರಾಜ್ ಅವರ ಕಣ್ಣನ್ನು ಅವರ ನಿಧನಾ ನಂತರವಷ್ಟೆ ತೆಗೆದುಕೊಂಡರು. ಈ ಹಳೆಯ ಮರೆಯಲಾಗದ ಘಟನೆಯನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ನೆನೆಸಿಕೊಂಡರು.