ಯೋಗರಾಜಭಟ್ಟರ ಪಂಚರಂಗಿ ಚಿತ್ರದಲ್ಲಿ ದಿಗಂತ್ ನಾಯಕ ನಟನಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸುದ್ದಿ ಹಳತು. ಈಗ ಬಂದಿರುವ ಹೊಸ ಸುದ್ದಿ ಏನಂದರೆ, ದಿಗಂತ್ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಕರಣ್.
ಈ ಕರಣ್ ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ನಟ ರವಿಚಂದ್ರನ್ ಅಭಿನಯದ ಕನಸುಗಾರ ಮತ್ತು ಹೊಸ ನಾಯಕ ನಟನ ಸೊಗಸುಗಾರ ಚಿತ್ರವನ್ನು ಕರಣ್ ನಿರ್ದೇಶಿಸಿದ್ದರು.
ಕರಣ್ ನಿರ್ದೇಶಿಸುತ್ತಿರುವ ದಿಗಂತ್ ನಟಿಸುತ್ತಿರುವ ಈ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ದಿಗಂತ್‌ಗೆ ನಾಯಕಿ ಯಾರೆಂಬುದು ಇನ್ನೂ ಫೈನಲ್ ಆಗಿಲ್ಲ. ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬಹುಪಾಲು ಚಿತ್ರೀಕರಣ ವಿದೇಶದಲ್ಲಿಯೇ ನಡೆಯಲಿದೆ.
ಅಂದಹಾಗೆ ದಿಗಂತ್ ಅಭಿನಯದ ನಾಲ್ಕು ಚಿತ್ರಗಳು ತೆರೆಗೆ ಬಂದಿಲ್ಲ. ಆ ಚಿತ್ರಗಳು ಯಾವುವೆಂದರೆ ಇ-ಪ್ರೀತಿ, ಬಿಸಿಲೆ ತಾರೆ ಮತ್ತು ಸ್ವಯಂವರ ಚಿತ್ರಗಳು. ಇ-ಪ್ರೀತಿ ಚಿತ್ರ ವಿವಾದವಾದ ಕಾರಣ ಹೊರಬರಲೇ ಇಲ್ಲ. ಉಳಿದ ಬಿಸಿಲೇ ಹಾಗೂ ತಾರೆ ಚಿತ್ರಗಳು ಬಿಡುಗಡೆಗೆ ಕಾದಿವೆ. ಕಿಟ್ಟಿ ಹಾಗೂ ಶರ್ಮಿಳಾ ಮಾಂಡ್ರೆ ಜೊತೆಗೆ ಅಭಿನಯಿಸಿದ ಸ್ವಯಂವರ ಚಿತ್ರ ಕೂಡಾ ಶೀಘ್ರದಲ್ಲೇ ತೆರೆಗೆ ಬರಲಿದೆ.