ಕನ್ನಡವೂ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಕೀರ್ತಿಯ ಉತ್ತುಂಗಕ್ಕೇರಿದ ರಂಭೆ ರಂಭಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈಗಾಗಲೇ ಜನವರಿ 27ರಂದು ಅವರ ನಿಶ್ಚಿತಾರ್ಥ ಕೆನಡಾ ಮೂಲದ ಉದ್ಯಮಿ ಇಂದ್ರನ್ ಜೊತೆಗೆ ಚೆನ್ನೈನಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ರಂಭಾ ಹಾಗೂ ಇಂದ್ರನ್ ನಡುವೆ ಏನೋ ನಡೀತಿದೆ ಎಂಬ ಗುಲ್ಲು ಹಬ್ಬಿತ್ತು. ಜಾಹೀರಾತೊಂದಕ್ಕೆ ರೂಪದರ್ಶಿಯಾಗುವ ಸಂಬಂಧ ಉದ್ಯಮಿ ಇಂದ್ರನ್ ಅವರ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಸ್ನೇಹ ಗಟ್ಟಿಯಾಗುವ ಮೊದಲು ಪ್ರೀತಿಯ ಚಿಗುರೊಡೆದಿತ್ತು. ಆದರೆ ಆ ಬಗ್ಗೆ ಗಾಸಿಪ್ ಕಾಲಂಗಳಲ್ಲಿ ಸುದ್ದಿಯಾಗುವ ಸಂದರ್ಭವೆಲ್ಲಾ, ಎಲ್ಲ ನಟಿಯರಂತೆ ರಂಭಾ ನನಗೂ ಇಂದ್ರನ್‌ಗೂ ಯಾವ ಅಫೇರ್ ಕೂಡಾ ಇಲ್ಲ, ನಾವಿಬ್ಬರೂ ಫ್ರೆಂಡ್ಸ್ ಅಂದರು.
ಆದರೆ, ಇಂದ್ರನ್ ತನ್ನ ರಂಭೆಗೆ ದುಬಾರಿ ಐಷಾರಾಮಿ ಕಾರನ್ನು ಗಿಫ್ಟ್ ನೀಡುತ್ತಲೇ ಎಲ್ಲರ ಕಣ್ಣೂ ಈ ಹೊಸ ರಂಭೆ-ಇಂದ್ರರ ಮೇಲೆ ಬಿದ್ದಿತ್ತು. ಕೊನೆಗೂ ರಂಭಾ ಇದೀಗ ಇಂದ್ರನ್ ಅವರ ಕೈಹಿಡಿಯುವುದು ಖಚಿತವಾಗಿದೆ. ನಿಶ್ಚಿತಾರ್ಥವೂ ನಡೆದಿದೆ.
ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ಈ ರಂಭೆ ರಂಭಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಳಿ ಹಾಗೂ ಭೋಜ್‌ಪುರಿ ಭಾಷೆಗಳಲ್ಲಿ ನಟಿಸಿದ್ದರು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದಿದ್ದ ರಂಭಾ ಕನ್ನಡದಲ್ಲಿ ಓ ಪ್ರೇಮವೇ, ಪಾಂಡುರಂಗ ವಿಠಲ, ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಭಾವ ಭಾಮೈದ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ.