ಮುಂಗಾರು ಮಳೆ ಜೊತೆಜೊತೆಗೇ ಹಿಟ್ ಆದ ಇನ್ನೊಂದು ಚಿತ್ರ ಸೂರಿ ನಿರ್ದೇಶನದ ದುನಿಯಾ. ದುನಿಯಾ ಚಿತ್ರ ಇಬ್ಬರು ಹೀರೋಗಳಾದ ವಿಜಯ್ ಹಾಗೂ ಯೋಗೀಶ್‌ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು. ರಂಗಾಯಣ ರಘು ಅವರಿಗೂ ಸಾಕಷ್ಟು ಕೀರ್ತಿ ನೀಡಿತು. ಇಂಥ ಚಿತ್ರವೀಗ ತಮಿಳಿಗೆ ರಿಮೇಕ್ ಆಗುತ್ತಿದೆ. ರಜನೀಕಾಂತ್ ಅಳಿಯ ಧನುಷ್ ದುನಿಯಾ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ರಿಮೇಕ್ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಅದ್ಯಾಕೋ ಏನೋ, ಧನುಷ್‌ಗೆ ಕನ್ನಡ ಚಿತ್ರಗಳತ್ತ ದೃಷ್ಟಿ ಹರಿದಿದೆ. ಅತ್ತ ದುನಿಯಾ ಚಿತ್ರದ ಲೂಸ್ ಮಾದ ಖ್ಯಾತಿಯ ಯೋಗೀಶ್, ಧನುಷ್ ಅವರನ್ನೇ ಹೋಲುತ್ತಿರುವ ಕಾರಣವೋ ಏನೋ, ಧನುಷ್ ಅಭಿನಯದ ತಮಿಳು ಚಿತ್ರಗಳನ್ನು ಕನ್ನಡಕ್ಕೆ ರಿಮೇಕಿಸಿ ನಟಿಸುತ್ತಿದ್ದಾರೆ. ಕಾದಲ್ ಕೊಂಡೈನ್, ಪೊಲ್ಲಾದವನ್ ಚಿತ್ರಗಳನ್ನು ರಾವಣ, ಪುಂಡ ಎಂಬ ಹೆಸರುಗಳಲ್ಲಿ ಕನ್ನಡದಲ್ಲಿ ನಟಿಸಿರುವುದು ಗೊತ್ತೇ ಇದೆ. ಆದರೆ ಈಗ ಧನುಷ್ ಕನ್ನಡ ಚಿತ್ರಗಳತ್ತ ಚಿತ್ತ ಹರಿಸಿ, ದುನಿಯಾ ಮೆಚ್ಚಿಕೊಂಡು ಅದನ್ನು ತಮಿಳಿಗೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
ಧನುಷ್ ಕೂಡಾ ರಿಮೇಕ್ ಚಿತ್ರಗಳಲ್ಲಿ ನಟಿಸೋದರಲ್ಲಿ ಎತ್ತಿದ ಕೈಯೇ. ಹಲವಾರು ರಿಮೇಕ್‌ಗಳಲ್ಲಿ ನಟಿಸಿರುವ ಧನುಷ್ ಇದೀಗ ದುನಿಯಾಕ್ಕೆ ತಮಿಳಿನಲ್ಲಿ ಏನು ನಾಮಕರಣ ಮಾಡುತ್ತಾರೋ ಗೊತ್ತಿಲ್ಲ. ಒಟ್ಟಾರೆ, ದುನಿಯಾದ ಹಕ್ಕುಗಳನ್ನು ಯೋಗೀಶ್‌ರ ಅಪ್ಪನಾದ ನಿರ್ಮಾಪಕ ಸಿದ್ಧರಾಜು ಕೈಯಿಂದ ಖರೀದಿಸಿದ್ದಾಗಿದೆ. ತಮಿಳಿನಲ್ಲಿ ದುನಿಯಾ ಏನು ಮೋಡಿ ಮಾಡುತ್ತೋ ಗೊತ್ತಿಲ್ಲ!