ಕನ್ನಡ ಚಿತ್ರರಂಗದಲ್ಲಿ ಇದೀಗ ಅದ್ದೂರಿ ಕ್ಲೈಮ್ಯಾಕ್ಸಿಗೊಂದು ಭರ್ಜರಿ ವೇದಿಕೆ ಸಿದ್ಧಮಾಡಲಾಗಿದೆ. ಹೀಗೆ ಭಾರೀ ಕ್ಲೈಮ್ಯಾಕ್ಸಿಗೆ ಎಲ್ಲಾ ತಯಾರಿ ನಡೆಸುತ್ತಿರುವವರು ಸಾಹಸ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಪ್ರಕಾಶ್ ರಾವ್.
ಓಂಪ್ರಕಾಶ್ ರಾವ್ ಅವರ ಎಕೆ 56 ಚಿತ್ರದಲ್ಲಿ ಒಂದು ರೈಲ್ವೆ ಬೋಗಿಯನ್ನು ಸ್ಫೋಟಿಸಲಿದ್ದಾರೆ. 20ಕ್ಕೂ ಹೆಚ್ಚು ಬೋಗಿಗಳಿರುವ ರೈಲಿನ ಸಹಾಯದೊಂದಿಗೆ ಅವರು ಎಕೆ 56 ಚಿತ್ರಕ್ಕೆ 3 ಹೆಲಿಕಾಪ್ಟರ್ ಬಳಸಿ 3.5 ಕೋಟಿ ರೂ.ವೆಚ್ಚ ಮಾಡಿ ಭರ್ಜರಿ ಕ್ಲೈಮ್ಯಾಕ್ಸಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಕ ಪಕ್ಕದ ರಾಜ್ಯಗಳ ಚಿತ್ರರಂಗ ಬೆಚ್ಚಿ ಬೀಳುವಂತೆ ಮಾಡಲಿದ್ದೇವೆ ಎಂಬುದು ಚಿತ್ರತಂಡದ ಮಾತು.
ಮಾರ್ಚ್ ತಿಂಗಳಲ್ಲಿ ತಮಿಳುನಾಡಿನ ಥೇಣಿ ರೈಲ್ವೆ ನಿಲ್ದಾಣದಲ್ಲಿ ಓಂಪ್ರಕಾಶ್ ರಾವ್ ಅವರಿಗೆ ಈ ಕ್ಲೈಮ್ಯಾಕ್ಸ್ ದೃಶ್ಯ ಹಿಡಿಯಲು 20 ದಿನಗಳ ಅನುಮತಿ ಸಿಕ್ಕಿದೆಯಂತೆ.