ರಕ್ಷಿತಾ ಮತ್ತೆ ಸಿನಿಮಾರಂಗ್ಕಕಿಳಿದಿದ್ದು ಗೊತ್ತೇ ಇದೆ. ಈ ಬಾರಿ ಸಿನಿಮಾದಲ್ಲಿ ರಕ್ಷಿತಾ ಸ್ವತಃ ಬಣ್ಣ ಹಚ್ಚದಿದ್ದರೂ, ಗಂಡ ಪ್ರೇಮ್ ನಿರ್ದೇಶಿಸುತ್ತಿರುವ ಜೋಗಯ್ಯ ಚಿತ್ರದ ನಿರ್ಮಾಣದ ಜೋಳಿಗೆಯನ್ನು ರಕ್ಷಿತಾ ಹಿಡಿದದ್ದು ಗೊತ್ತೇ ಇದೆ. ರಕ್ಷಿತಾ ತನ್ನ ಮೊದಲ ಚಿತ್ರ ನಿರ್ಮಾಣದ ಖುಷಿಗೆ ಇತ್ತೀಚೆಗೆ ಕಾರ್ಯಕ್ರಮ ಏರ್ಪಡಿಸಿದ್ದರು. ರಕ್ಷಿತಾ ಪ್ರೇಮ್ ದಂಪತಿಗಳೊಂದಿಗೆ ಅಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಗಳು.
ರಕ್ಷಿತಾ ಈ ಸಮಾರಂಭಕ್ಕೆ ಎಲ್ಲ ನಟನಟಿಯರಿಗೂ ಆಮಂತ್ರಣ ನೀಡಿದ್ದರು. ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಚಿತ್ರೋದ್ಯಮದ ಬಹುತೇಕ ಮಂದಿ ಅಲ್ಲಿ ನೆರೆದಿದ್ದರು. ಆದರೆ, ಸಮಾರಂಭಕ್ಕೆ ರಮ್ಯಾ ಬರಲಿಲ್ಲ. ಹಲವು ಜಗಳಗಳಿಂದ ಜಗತ್ ಪ್ರಸಿದ್ಧವಾಗಿದ್ದ ಜೋಡಿ ಎಂದರೆ ಇದೇ ರಮ್ಯಾ- ರಕ್ಷಿತಾ. ಹಾಗಾದರೆ, ರಮ್ಯಾಗೆ ಆಹ್ವಾನ ಮಾಡಿದ್ದೀರಾ ಎಂದರೆ ರಕ್ಷಿತಾ ಹೌದು ಎನ್ನುತ್ತಾರೆ. ಆದರೆ, ರಮ್ಯಾ ಸಮಾರಂಭಕ್ಕೆ ಬರಲಾಗುವುದಿಲ್ಲ ಎಂದು ತನಗೆ ಮೊದಲೇ ಫೋನ್ ಮಾಡಿ ಹೇಳಿದ್ದರು, ಅಷ್ಟೇ ಅಲ್ಲ, ಜೋಗಯ್ಯ ಚಿತ್ರದ ಯಶಸ್ಸಿಗಾಗಿ ತನಗೆ ಶುಭ ಹಾರೈಸಿದರು ಎಂದು ರಕ್ಷಿತಾ ವಿವರಿಸುತ್ತಾರೆ. ಇತ್ತೀಚೆಗಷ್ಟೆ ರಕ್ಷಿತಾ ತಾನು ತನ್ನ ನಿರ್ಮಾಣದ ಮುಂಬರುವ ದಿನಗಳ ಚಿತ್ರಗಳಲ್ಲಿ ರಮ್ಯಾಗೆ ಅವಕಾಶ ನೀಡಲು ಸಿದ್ಧ ಎಂದು ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು.
MOKSHA
ಈ ಬಗ್ಗೆ ಮಾತನಾಡಿದ ರಕ್ಷಿತಾ, ನಾನು ನೀಡಿದ ಆಹ್ವಾನಕ್ಕೆ ಬೆಲೆ ಕೊಟ್ಟು ಬಹುತೇಕ ನಟನಟಿಯರು ಆಗಮಿಸಿದ್ದಕ್ಕೆ ನಾನು ಋಣಿ. ನಾನು ರಮ್ಯಳಿಗೂ ಆಹ್ವಾನ ನೀಡಿದ್ದೆ. ಆಕೆ ನನಗೆ ಫೋನ್ ಮಾಡಿ, ತನಗೆ ತನ್ನ ಅತ್ಯಂತ ಆಪ್ತ ಬಂಧುಗಳ ಮನೆಯಲ್ಲಿ ನಿಶ್ಚಿತಾರ್ಥಕ್ಕೆ ತೆರಳಬೇಕಿರುವುದರಿಂದ ಸಮಾರಂಭಕ್ಕೆ ಬರಲಾಗುವುದಿಲ್ಲ ಎಂದು ಹೇಳಿ ನನಗೆ ಶುಭಹಾರೈಸಿದರು. ಹೀಗೆ ಎಲ್ಲರೂ ನನಗೆ ಪ್ರೀತಿಪೂರ್ವಕ ಶುಭ ಹಾರೈಕೆ ನೀಡುತ್ತಿರುವುದರಿಂದ ನನಗೆ ಅತೀವ ಸಂತಸವಾಗುತ್ತಿದೆ. ಚಿತ್ರೋದ್ಯಮ ನನ್ನನ್ನು ಇಷ್ಟು ಪ್ರೀತಿಸಿದೆ ಎಂದು ತಿಳಿದು ನನಗೆ ನನ್ನ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕೆಂಬುದೇ ತಿಳಿಯುತ್ತಿಲ್ಲ. ಪ್ರೇಮ್ ಸದ್ಯಕ್ಕೆ ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಏ.24ರಂದು ಚಿತ್ರಕ್ಕೆ ಮುಹೂರ್ತ ಇಟ್ಟಿದ್ದೇವೆ ಎಂದು ರಕ್ಷಿತಾ ಜೋಗಯ್ಯ ಚಿತ್ರದ ಬಗ್ಗೆ ವಿವರಿಸಿದರು.
ವಿಶೇಷ ಕ್ಯಾಲೆಂಡರ್: ವಿಶೇಷವೆಂದರೆ, ರಕ್ಷಿತಾ ಕನ್ನಡದ ನಟನಟಿಯರನ್ನು ಒಳಗೊಂಡ ಮೋಹಕ ಕ್ಯಾಲೆಂಡರನ್ನೂ ಹೊರತಂದಿದ್ದಾರೆ. ಈ ಕ್ಯಾಲೆಂಡರ್‌ನಲ್ಲಿ ಕೇವಲ ಸೂಪರ್ ಸ್ಟಾರ್‌ಗಳು ಮಾತ್ರವಲ್ಲ, ಅಂದು ತನ್ನ ಜೊತೆಗೆ ಕೆಲಸ ಮಾಡಿದ ಮಂದಿ, ತನ್ನ ಜೊತೆಜೊತೆಗೆ ಕೀರ್ತಿ ಪಡೆದ ನಟನಟಿಯರು ಅಷ್ಟೇ ಅಲ್ಲ, ಈಗ ಕೀರ್ತಿ ಗಳಿಸುತ್ತಿರುವ ಯುವ ಪ್ರತಿಭಾವಂತ ನಟಿಯರ ಆಕರ್ಷಕ ಫೋಟೋಗಳನ್ನೂ ಸ್ವಲ್ಪವೂ ಅಸೂಯೆ ಪಡದೆ ಪ್ರಕಟಿಸಿ ಕ್ಯಾಲೆಂಡರ್ ಅಂದ ಹೆಚ್ಚಿಸಿದ್ದು ಎಲ್ಲರ ಸಂತಸಕ್ಕೆ ಕಾರಣವಾಗಿದೆ. ನಟಿ ರಾಧಿಕಾ ಪಂಡಿತ್ ತುಂಬ ಖುಷಿಯಿಂದ ರಕ್ಷಿತಾರ ಕೆಲಸವನ್ನು ಶ್ಲಾಘನೆ ಮಾಡುತ್ತಾರೆ.
ಕೈತುಂಬ ಚಿತ್ರಗಳಲ್ಲಿ ನಟಿಸದಿದ್ದರೂ ತಾನು ನಟಿಸಿದ ಚಿತ್ರಗಳೆಲ್ಲವುಗಳಲ್ಲೂ ತಾನೊಬ್ಬ ಭರವಸೆಯ ಪ್ರತಿಭಾವಂತ ನಟಿ ಎಂದು ಸಾಧಿಸುತ್ತಿರುವ ರಾಧಿಕಾ ಪಂಡಿತ್ ಕೂಡಾ ಈ ಕ್ಯಾಲೆಂಡರ್‌ನಲ್ಲಿ ಸ್ಥಾನ ಪಡೆದಿದ್ದಾರೆ. ರಾಧಿಕಾ ಹೇಳುವಂತೆ, ರಕ್ಷಿತಾರು ಹೀಗೆ ಮಾಡಿದ್ದು ತುಂಬ ಖುಷಿ ತರುತ್ತಿದೆ. ಹಿಂದೆ ರಕ್ಷಿತಾರಂತೆ ಗ್ಲ್ಯಾಮರಸ್ ಆಗಿ ಮಿಂಚುತ್ತಿರುವ ಐಂದ್ರಿತಾ ರೇ ಹೇಳುವಂತೆ, ರಕ್ಷಿತಾರು ತಾವು ಇತರರಿಗೆ ಹೇಗೆ ಗೌರವ ಕೊಡಬೇಕೆಂಬುದನ್ನು ಮಾಡಿ ತೋರಿಸಿದ್ದಾರೆ. ಪುರುಷ ಪ್ರಧಾನವಾದ ಈ ಚಿತ್ರೋದ್ಯಮದಲ್ಲಿ ನಟಿಯರಿಗೂ ಒಂದು ಬೆಲೆ ಕೊಡುವುದನ್ನು ರಕ್ಷಿತಾ ತೋರಿಸಿಕೊಟ್ಟಿದ್ದಾರೆ ಎಂದು ಐಂದ್ರಿತಾ ಹೇಳಿದ್ದಾರೆ.