ತಮಿಳು ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿ ಪಡ್ಡೆಗಳ ನಿದ್ದೆ ಕೆಡಿಸಿದ ನಟಿ ಖುಷ್ಬೂ. ಈ ಚೆಲುವೆಯನ್ನು ಕನ್ನಡಕ್ಕೆ ಪರಿಚಯಿಸಿದವರು ನಮ್ಮ ಕ್ರೇಜೀಸ್ಟಾರ್ ರವಿಚಂದ್ರನ್.
ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಖುಷ್ಬೂ ಸೈ ಎನಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ ಖುಷ್ಬೂ, ಜನನಿ ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಈಗ ಕೇವಲ ಪೋಷಕ ಪಾತ್ರಗಳಿಗೆ ಮಾತ್ರ ಖುಷ್ಬೂ ಸೀಮಿತರಾಗಿದ್ದಾರೆ. ಟಿವಿ ರಿಯಾಲಿಟಿ ಷೋಗಳಲ್ಲೇ ಬ್ಯುಸಿಯಾಗಿರುವ ಖುಷ್ಬೂ, ಕನ್ನಡಕ್ಕೆ ಮರಳಿ ಬಂದಿರುವುದು ವಿಶೇಷವಲ್ಲ. ಕೆಲವು ವರ್ಷಗಳ ಹಿಂದೆಯೇ ಜನನಿ ಚಿತ್ರ ಚಿತ್ರೀಕರಣ ಮುಗಿಸಿದ್ದರೂ, ಬಿಡುಗಡೆಯ ಭಾಗ್ಯ ಕಂಡಿರಲಿಲ್ಲ. ಕೊನೆಗೂ ಈ ಚಿತ್ರ ಬಿಡುಗಡೆಯ ಭಾಗ್ಯ ಕಾಣುತ್ತಿರುವುದು ವಿಶೇಷ. ಅದಕ್ಕೂ ಮಿಗಿಲಾದ ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಕ ನಟನಾಗಿ ಖುಷ್ಬೂ ಅವರ ಸಹೋದರ ನಟಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ!