ರಾಧಿಕಾ ಪಂಡಿತ್‌ಳಂಥ ಪ್ರತಿಭಾವಂತ, ಸರಳ ಸುಂದರಿ ನಟಿಗೆ ಈಗ್ಯಾಕಪ್ಪಾ ರಾಮ ಜಪದ ಕೆಲಸ ಎಂದುಕೊಳ್ಳಬೇಡಿ. ಇದು ಕೇವಲ ಚಿತ್ರವೊಂದರ ಹೆಸರಷ್ಟೆ. ಹೌಸ್‌ಫುಲ್ ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ ಮತ್ತೊಮ್ಮೆ ನಿರ್ದೇಶನ ಹಾಗೂ ನಟನೆಯ ಅಸ್ತ್ರವನ್ನು ಜಂಟಿಯಾಗಿ ಕೈಹಿಡಿದಿದ್ದಾರೆ. ಹೇಮಂತ್ ತಮ್ಮ ಹೊಸ ಚಿತ್ರಕ್ಕೆ ರಾಮ ರಾಮ ಶ್ರೀರಾಮ ಎಂದು ನಾಮಕರಣ ಮಾಡಿದ್ದಾರೆ.
ಈ ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ನಟಿಸುವ ಸಾಧ್ಯತೆಗಳೂ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಮೋಹಕ ಹಾಟ್ ಬಾಲಿವುಡ್ ಬೆಡಗಿ ತನುಶ್ರೀ ದತ್ತಾಳ ಹೆಸರೂ ಕೂಡಾ ಚಾಲ್ತಿಯಲ್ಲಿದೆ. ಚಿತ್ರದ ನಿರ್ದೇಶನ ಹಾಗೂ ನಟನೆಯೊಂದಿಗೆ, ಚಿತ್ರಕಥೆಯ ಜವಾಬ್ದಾರಿಯನ್ನೂ ಹೇಮಂತ್ ನಿರ್ವಹಿಸಲಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಿಂದಿಯ ಗುಲ್ಶನ್ ಗ್ರೋವರ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.
IFM
ರಾಷ್ಟ್ತ್ರಪ್ರಶಸ್ತಿ ಬಾಚಿದ ಗಗ್ಗರ ಚಿತ್ರದ ಛಾಯಾಗ್ರಾಹಕ ಸುರೇಶ್ ಬೈರಸಂದ್ರ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಇದು ಸಂಪೂರ್ಣ ಹಾಸ್ಯ ಮಯ ಚಿತ್ರ ಎನ್ನುತ್ತಿದ್ದಾರೆ ಹೇಮಂತ್.
ಅಂದಹಾಗೆ, ಈ ಚಿತ್ರಕ್ಕೆ ಮೂವರು ನಾಯಕಿಯರಂತೆ. ಬಾಲಿವುಡ್ಡಿನ ತನುಶ್ರೀ ದತ್ತ, ಐಶ್ವರ್ಯ ದುಗ್ಗಲ್ ಮತ್ತು ಕನ್ನಡದ ರಾಧಿಕಾ ಪಂಡಿತ್ ಈ ಮೂವರು ನಾಯಕಿಯರೆಂದೇ ಬಹುತೇಕ ಹೇಳಲಾಗುತ್ತಿದೆ.