ಕಿರುತೆರೆಯ ಧಾರಾವಾಹಿಗಳನ್ನು ಮಾಡಿಕೊಂಡು ಕನ್ನಡ ಚಿತ್ರರಂಗ ಪ್ರವೇಶಿಸಿದ ಶಿವಧ್ವಜ್, ತುಳು ಚಿತ್ರ 'ಗಗ್ಗರ'ಕ್ಕೆ ರಾಷ್ಟ್ರಪ್ರಶಸ್ತಿ ಸ್ವೀಕರಿಸುವುದರ ಮೂಲಕ ಸಂಭ್ರಮದ ಅಲೆಯನ್ನು ಎಬ್ಬಿಸಿದ್ದಾರೆ.
ದಕ್ಷಿಣ ಕನ್ನಡದ ಭೂತದ ಕೋಲ ಸಂಸ್ಕೃತಿಯ ಎಳೆಯನ್ನು ಇಟ್ಟುಕೊಂಡು ಸ್ವತಃ ಶಿವಧ್ವಜ್ 'ಗಗ್ಗರ'ವನ್ನು ನಿರ್ದೇಶಿಸಿದ್ದರು. ಅಲ್ಲದೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದರು.
ಭೂತಗಳಲ್ಲಿ ಎರಡು ವಿಧಗಳಿವೆ. ಅವುಗಳಲ್ಲಿ ಒಂದು ಗ್ರಾಮಕ್ಕೆ ಸೇರಿದ ಭೂತ, ಮತ್ತೊಂದು ಕುಟುಂಬಕ್ಕೆ ಸೇರಿದ ಭೂತ. ಇವುಗಳಲ್ಲಿ ಶಿವಧ್ವಜ್ ತಮ್ಮ ಚಿತ್ರಕ್ಕೆ ಆರಿಸಿಕೊಂಡದ್ದು ಕುಟುಂಬಕ್ಕೆ ಸೇರಿದ ಭೂತ.
ಹಾಂ, ಗಗ್ಗರ ಪದದ ಅರ್ಥ ಹಲವರಿಗೆ ತಿಳಿದಿಲ್ಲ. ಅಲ್ಲವೇ? ತುಳುವಿನಲ್ಲಿ ಗಗ್ಗರ ಎಂದರೆ, ಭೂತದ ಕೋಲ ಕಟ್ಟುತ್ತಾರಲ್ಲ, ಆವಾಗ ಕಾಲುಗಳಿಗೆ ಕಟ್ಟುವ ಲೋಹದ ಗೆಜ್ಜೆಯೇ 'ಗಗ್ಗರ'.