ಬಾಲಿವುಡ್ಡಿನ ಕೋಗಿಲೆ ಕಂಠದ ಗಾಯಕಿ ಆಶಾ ಭೋಂಸ್ಲೆ ಕನ್ನಡ ಚಿತ್ರವೊಂದರಲ್ಲಿ ಹಾಡಲಿದ್ದಾರೆ! ಅವರು ಹಾಡಿದ ಕನ್ನಡ ಹಾಡನ್ನು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮುಂಬೈನಿಂದ ರೆಕಾರ್ಡ್ ಮಾಡಿಕೊಂಡು ಬಂದಿದ್ದಾರೆ.
'ಜೋತೆಗಾರನಿಲ್ಲ ಜೊತೆಯಾರೂ, ಜೊತೆಗಾರ ನಿನಗೆ ಕಾದಿರುವೆ..' ಎಂಬ ಈ ಹಾಡನ್ನು ಆಶಾ ಮುಂಬೈಯ ಸ್ಟುಡಿಯೋದಲ್ಲಿ ಹಾಡಿದ್ದಾರೆ. ಈ ಹಾಡಿಗೆ ರಾಘವೇಂದ್ರ ಕಾಮತ್ ಅವರ ಸಾಹಿತ್ಯವಿದೆ. ಬಸವ ರೆಡ್ಡಿ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮಂದಹಾಸ ಎಂಬ ಚಿತ್ರಕ್ಕೆ ಈ ಹಾಡು ಬಳಸಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಆಶಾ ಅವರ ಅಕ್ಕ, ಮತ್ತೊಬ್ಬ ಕೋಗಿಲೆ ಲತಾ ಮಂಗೇಶ್ಕರ್ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಬೆಳ್ಳನೆ ಬೆಳಗಾಯಿತು... ಹಾಡನ್ನು ಹಾಡಿದ್ದಾರೆ. ಈಗ ಅಕ್ಕನಂತೆ ತಂಗಿ ಆಶಾ ಕೂಡಾ ಕನ್ನಡಕ್ಕಾಗಿ ಕಂಠದಾನ ಮಾಡಿದ್ದಾರೆ.
ಆಶಾರಿಂದ ಒಂದು ಹಾಡನ್ನು ಹಾಡಿಸಬೇಕೆನ್ನುವುದು ವೀರ್ ಸಮರ್ಥರ ಬಹುವರ್ಷಗಳ ಕನಸು. ರಾಘವೇಂದ್ರ ಕಾಮತ್‌ರಿಂದ ಚೆಂದದ ಒಂದು ಗೀತೆಯನ್ನು ಬರೆಸಿಕೊಂಡು ತಮ್ಮ ಮುಂಬೈ ಸ್ನೇಹಿತರ ಸಹಾಯದಿಂದ ಕೊನೆಗೂ ಆಶಾರಿಂದ ಹಾಡನ್ನು ಹಾಡಿಸಿಯೇ ಬಿಟ್ಟಿದ್ದಾರೆ. ಕೇಳೋ ಭಾಗ್ಯ ಕನ್ನಡಿಗರದು.