ಉಪೇಂದ್ರ ಅವರ ಮುಂಬರುವ 'ಸೂಪರ್' ಅರ್ಥ ಧ್ವನಿಸುವ ಹೆಸರಿಲ್ಲದ ಚಿಹ್ನೆಯ ಚಿತ್ರದಲ್ಲಿ ತಮಿಳು ಹಾಟ್ ನಟಿ ನಯನತಾರಾ ನಟಿಸೋದು ಪಕ್ಕಾಗಿದೆ. ಈ ಹಿಂದೆ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗುಲ್ಲು ಹಬ್ಬಿತ್ತಾದರೂ, ನಂತರ ಇದು ಕ್ರಮೇಣ ಕಡಿಮೆಯಾಯಿತು. ಆಗ ಹುಟ್ಟಿಕೊಂಡದ್ದು, ನಯನತಾರಾರ ಬರುವಿಕೆಯ ಸುದ್ದಿ. ಇದೀಗ ನಯನತಾರಾ ಬರುತ್ತಿರುವುದು ಖಚಿತವಾಗಿದೆ. ಈ ಚಿತ್ರ ಇದೇ ಫೆ.17ರಂದು ಸೆಟ್ಟೇರಲಿದೆ.
ಉಪೇಂದ್ರ ಇದೇ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಶೇಷಾದ್ರಿಪುರಂನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಚಿತ್ರದ ಯಶಸ್ಸು ಬಯಸಿ ತೆಂಗಿನಕಾಯಿ ಒಡೆದಿದ್ದಾರೆ. ಉಪೇಂದ್ರ ಅವರ ತಂದೆ, ತಾಯಿ ಹಾಗೂ ಕುಟುಂಬ ವರ್ಗ ಈ ಪೂಜೆಯಲ್ಲಿ ಹಾಜರಿದ್ದರು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡಾ ಪೂಜೆಯಲ್ಲಿ ಭಾಗವಹಿಸಿದ್ದರು.
WD
ವಿಶೇಷವೆಂದರೆ ಈ ಚಿತ್ರದಲ್ಲಿ ಉಪೇಂದ್ರ ಕೇವಲ ನಟರಲ್ಲ. ನಿರ್ದೇಶಕರು ಕೂಡಾ. 10 ವರ್ಷಗಳ ಅಂತರದ ನಂತರ ಇದೀಗ ನಿರ್ದೇಶಕನ ಕುರ್ಚಿಗೆ ಉಪೇಂದ್ರ ಮರಳಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಈಗಾಗಲೇ ಸೂಪರ್ ಎಂಬ ಅರ್ಥ ಧ್ವನಿಸುವ, ಹೆಬ್ಬೆರಳು ಹಾಗೂ ತೋರು ಬೆರಳು ಜೋಡಿರುವ ಕೈಯ ಸಂಕೇತವಿರುವ ಬ್ಯಾನರ್‌ಗಳು ಉಪೇಂದ್ರ ಅಭಿಮಾನಿಗಳಲ್ಲಿ ಹೊಸ ಕುತೂಹಲದ ಅಲೆ ಸೃಷ್ಟಿಸಿತ್ತು.
ಈ ಹಿಂದೆಯೇ ನಯನತಾರಾರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆದಿತ್ತು. ನಿರ್ಮಾಪಕ ಮುನಿರತ್ನ ತಾನು ನಿರ್ಮಿಸುತ್ತಿರುವ ರವಿಚಂದ್ರನ್ ತಾರಾಗಣದ ಕೀಚಕ ಚಿತ್ರಕ್ಕೆ ನಯನತಾರಾ ನಾಯಕಿ ಎಂದು ಘೋಷಿಸಿಯೂ ಬಿಟ್ಟಿದ್ದರು. ಆದರೆ ಅದ್ಯಾಕೋ ನಂತರ ಆ ಸುದ್ದಿ ಸುಳ್ಳಾಯಿತು. ಅಷ್ಟಾಗಲೇ, ಮುನಿರತ್ನ ಅವರ ಖಾಸಾ ಸಂಬಂಧಿಗಳಾಗಿರುವ ರಾಕ್‌ಲೈನ್ ವೆಂಕಟೇಶ್ ಅವರೇ ತಮ್ಮ ನಿರ್ಮಾಣದ ಉಪೇಂದ್ರರ ಚಿತ್ರಕ್ಕೆ ನಯನತಾರಾರ ಆಗಮನಕ್ಕೆ ಕಾರಣರಾಗಿದ್ದಾರೆ. ಅಂತೂ ನಯನತಾರಾ ಬಂದಾಗಿದೆ. ಉಪೇಂದ್ರ ಕೂಡಾ ರೆಡಿಯಾಗಿದ್ದಾರೆ. ಸೂಪರ್ ಚಿತ್ರ ಏನಾಗುತ್ತೋ ಕಾಯಬೇಕು.