ಅಭಿಮಾನಿಗಳನ್ನು ಅಗಲಿದ ನಂತರ ತೆರೆಕಂಡ ವಿಷ್ಣು ಅಭಿನಯದ ಸ್ಕೂಲ್ ಮಾಸ್ಟರ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಚಿತ್ರ ತೆರೆ ಕಂಡು ಮೂರು ವಾರಗಳೇ ಕಳೆದರೂ, ಮಾಸ್ಟರ್ ಚಿತ್ರ ತೆರೆಕಂಡ ಚಿತ್ರಮಂದಿರದ ಕಡೆಗೆ ಪ್ರೇಕ್ಷಕರು ತಲೆ ಹಾಕಿ ಮಲಗುತ್ತಿಲ್ಲವಂತೆ. ಆರಂಭದ ದಿನವಷ್ಟೇ ಕೊಂಚ ಉತ್ತಮ ಓಪನಿಂಗ್ ಕಂಡರೂ ನಂತರ ಯಾಕೋ ಚಿತ್ರ ಓಡುತ್ತಿಲ್ಲ. ಈ ಚಿತ್ರದ ನಿರ್ಮಾಪಕರಾದ ಸಿ.ಆರ್.ಮನೋಹರ್ ಅವರಿಗೆ ಕನಿಷ್ಠ ಮೂರು ಕೋಟಿ ನಷ್ಟವಾಗಿದೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿವೆ.
ವಿಷ್ಣು ಅವರಂಥ ಮೇರು ನಟನ ಅಭಿನಯವಿದ್ದರೂ ಮಾಸ್ಟರ್ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ತಮಗೆ ಇದರಿಂದ ಬೇಸರವಾಗಿದೆ. ಈ ಚಿತ್ರದಿಂದ ಎಷ್ಟು ನಷ್ಟವಾಗಿದೆ ಎಂಬುದು ಬೇಡ. ಒಟ್ಟಾರೆ ಚಿತ್ರರಂಗಕ್ಕೆ ಬಂದು ಹಲವು ಕೋಟಿಗಳನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಹಲವು ದಿನಗಳ ಕಾಲ ಸಿನಿಮಾ ರಂಗದಿಂದ ದೂರ ಇರಲು ಬಯಸುತ್ತಿರುವುದಾಗಿ ನಿರ್ಮಾಪಕ ಮನೋಹರ್ ತಮ್ಮ ಆತ್ಮೀಯರಲ್ಲಿ ಹೇಳಿಕೊಳ್ಳುತ್ತಿದ್ದಾರಂತೆ.