ಹಿರಿಯ ನಟ ದಿ|ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಅವರ ವಿವಾಹ ಇತ್ತೀಚೆಗೆ ಸಂಭ್ರಮದಿಂದ ನಗರದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿತು. ವಿವಾಹದ ನಂತರ ನಡೆದ ಆರತಕ್ಷತೆ ಸಮಾರಂಭದಲ್ಲಿ ಚಿತ್ರೋದ್ಯಮದ ಹಲವು ನಟನಟಿಯರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಗಣ್ಯರು, ಸ್ನೇಹಿತರು, ಹಿತೈಷಿಗಳು ಈ ಸಂದರ್ಭದಲ್ಲಿ ನವ ದಂಪತಿಗೆ ಶುಭ ಕೋರಿದರು.
ನಟನಟಿಯರಾದ ಪೂಜಾ ಗಾಂಧಿ, ರಾಧಿಕಾ ಗಾಂಧಿ, ಮಾಳವಿಕಾ, ಅವಿನಾಶ್, ದೊಡ್ಡಣ್ಣ, ರವಿಚಂದ್ರನ್ ಸೇರಿದಂತೆ ಬಹುತೇಕ ಹಿರಿತೆರೆ ಹಾಗೂ ಕಿರುತೆರೆ ನಟನಟಿಯರ ದಂಡೇ ಅಲ್ಲಿ ನೆರೆದಿತ್ತು. ಪರಸ್ಪರ ಶುಭಹಾರೈಕೆಗಳ ನಡುವೆ ತಾರೆಯರ ರಂಗಿನಿಂದ ಸಮಾರಂಭಕ್ಕೆ ಕಳೆ ಬಂದಿತ್ತು.
ಹಿರಿತೆರೆಗಿಂತಲೂ ಕಿರುತೆರೆಯಲ್ಲಿ, ಅದರಲ್ಲೂ ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡು ಜನಪ್ರಿಯರಾಗಿರುವ ನಟ ಸೃಜನ್ ಲೋಕೇಶ್ ಅವರಂತೆಯೇ ಅವರ ಪತ್ನಿ ಗ್ರೀಷ್ಮಾ ಸಹ ಹಲವಾರು ದಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿಸುತ್ತಿದ್ದಾರೆ ಕೂಡಾ. ಈ ಮೊದಲು ಸೃಜನ್ ಅವರ ಹೆಸರು ಮಾಜಿ ನಟಿಯೊಬ್ಬರ ಜೊತೆ ಥಳಕು ಹಾಕಿಕೊಂಡಿತ್ತಾದರೂ, ಇದೀಗ ಗ್ರೀಷ್ಮಾ ಅವರನ್ನು ವಿವಾಹವಾಗುವ ಮೂಲಕ ಆ ಊಹಾಪೋಹಗಳಿಗೆ ಪೂರ್ಣವಿರಾಮ ಬಿದ್ದಿದೆ.