ವಿಷ್ಣುವರ್ಧನ್ ಅಭಿನಯದ ಕೊನೆಯ ಚಿತ್ರ ಆಪ್ತರಕ್ಷಕ ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದು ಗೊತ್ತಿರ ಸಂಗತಿಯೇ. ಆದರೆ, ಇದೀಗ ಆಪ್ತರಕ್ಷಕ ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ಕೇವಲ ಕೂದಲೆಳೆಯಲ್ಲಿ ಅಫಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾದ ವಿಚಾರ ಗೊತ್ತೇ?
ಹೌದು. ಆಪ್ತರಕ್ಷಕ ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್, ಇತ್ತೀಚೆಗೆ ಚೆನ್ನೈಗೆ ಚಿತ್ರದ ಪ್ರಥಮ ಪ್ರತಿ ಸಿದ್ಧಪಡಿಸಲು ತೆರಳಿ ಬೆಂಗಳೂರಿಗೆ ವಾಪಾಸಾಗುವ ಸಂದರ್ಭ ಈ ಘಟನೆ ನಡೆದಿದೆ. ಆಪ್ತರಕ್ಷಕ ಚಿತ್ರದ ಪ್ರಥಮ ಪ್ರತಿ ಪಡೆಯಲು ಕೃಷ್ಣಪ್ರಜ್ವಲ್ ಚೆನ್ನೈಗೆ ತೆರಳಿದ್ದರು. ಪ್ರತಿಯನ್ನು ಪಡೆದು ಫೋರ್ಡ್ ಕಾರಿನಲ್ಲಿ ಮರಳುತ್ತಿರುವಾಗ ಹೊಸೂರು ಸಮೀಪ ಕಾರಿಗೆ ಟ್ರಕ್ ಢಿಕ್ಕಿ ಹೊಡೆದಿದೆ. ಕೂದಲೆಳೆಯಷ್ಟರಲ್ಲಿ ಕಾರಿನ ಚಾಲಕ ಹಾಗೂ ನಿರ್ಮಾಪಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರಿಗೆ ತೀವ್ರ ಹಾನಿಯಾಗಿದೆ.
ವಿಶೇಷವೆಂದರೆ, ಚಿತ್ರದ ಪ್ರಥಮ ಪ್ರತಿಯ ಪೊಟ್ಟಣಕ್ಕೇನೂ ತೊಂದರೆಯಾಗಿಲ್ಲ. ಕಾರನ್ನು ತುಂಬ ನಿಧಾನವಾಗಿ ಚಲಾಯಿಸುತ್ತಿದ್ದರೂ, ಈ ಘಟನೆ ಸಂಭವಿಸಿದ್ದು, ಅದೃಷ್ಟದಿಂದ ಪ್ರಾಣಕ್ಕೇನೂ ತೊಂದರೆಯಾಗಿಲ್ಲ ಎಂದು ನಿರ್ಮಾಪಕ ಕೃಷ್ಣಪ್ರಜ್ವಲ್ ಹೇಳಿದ್ದಾರೆ. ಆದರೆ ಇಂತಹ ಘಟನೆಗಳಿಗೂ ನಾಗವಲ್ಲಿಗೂ ಸಂಬಂಧ ಥಳುಕು ಹಾಕುವುದು ಮಾತ್ರ ಒಳ್ಳೆಯದಲ್ಲ ಎಂದು ಚಿತ್ರತಂಡ ಹೇಳಿದೆ.