ಬಹಳ ದಿನದಿಂದ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ ಜೋಗಯ್ಯ ಸುದ್ದಿಯಲ್ಲಿತ್ತು. ಆದರೆ ಶಿವಣ್ಣ ಅವರ 99ನೇ ಚಿತ್ರದ ಬಗ್ಗೆ ಕುತೂಹಲ ಹಾಗೆಯೇ ಉಳಿದಿತ್ತು. ಅವರ 99ನೇ ಚಿತ್ರ ಯಾವುದು ಎಂಬ ಪ್ರಶ್ನೆಗೂ ಈವರೆಗೆ ಉತ್ತರ ಇರಲಿಲ್ಲ. ಈಗ ಈ ಪ್ರಶ್ನೆಗೆ ತಾಜ್‌ಮಹಲ್ ಖ್ಯಾತಿಯ ನಿರ್ದೇಶಕ ಚಂದ್ರು ಉತ್ತರ ನೀಡಿದ್ದಾರೆ.
ಹೌದು. ಚಂದ್ರು ಅವರ ನಿರ್ದೇಶನದ 'ಮೈಲಾರಿ 99 ನಾಟ್ಔಟ್' ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಚಿತ್ರ ಮಾರ್ಚ್ ಮೊದಲ ವಾರ ಮುಹೂರ್ತ ಬರಲಿದೆ. ಚಂದ್ರು ಅವರ ಪ್ರಕಾರ, ಇದು ಎರಡನೇ ಓಂ ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ಚಿತ್ರದ ಕಥೆ ಕೇಳಿ ಶಿವಣ್ಣ ಬಹಳ ಸಂತೋಷ ಪಟ್ಟರು ಎನ್ನುತ್ತಾರೆ ಚಂದ್ರು. (ಆದರೆ ಗಿಮಿಕ್ ಹಾಗೂ ಪ್ರಚಾರದಲ್ಲಿ ಈ ಚಂದ್ರು ಎರಡನೇ ಪ್ರೇಮ್ ಆಗುತ್ತಾರೆ ಎಂಬ ಮಾತೂ ಇದೆ ಬಿಡಿ!)
ಅದೇನೇ ಇರಲಿ, ಇದೊಂದು ಮಾಸ್ ಚಿತ್ರ. ಮೊದಲ ಬಾರಿಗೆ ರೌಡಿಸಂ ಇರುವ ಕಥೆಯನ್ನು ಆರಿಸಿಕೊಂಡಿದ್ದಾರೆ ಚಂದ್ರು. ನಾಯಕಿಯ ಹುಡುಕಾಟ ನಡೆಯುತ್ತಿದೆ. ಇನ್ನೊಂದು ವಿಷಯವೇನಂದ್ರೆ, ಚಂದ್ರು ಅವರು ಚಿತ್ರದ ಯಶಸ್ಸಿನ ಬಗ್ಗೆ ಏನು ಹೇಳುವುದಿಲ್ಲವಂತೆ. ಚಿತ್ರ ಮಾಡಿ ಗೆಲ್ಲಿಸಿದ ಮೇಲೆ ಮಾತನಾಡುತ್ತೇನೆ ಎನ್ನುತ್ತಿದ್ದಾರೆ!